ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮಾಟ, ಮಂತ್ರ ಸದ್ದು ಮಾಡುತ್ತಿದೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ, ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ.
ಇಂದು (ಏಪ್ರಿಲ್ 21) ಬೆಂಗಳೂರಿನಲ್ಲಿ ಮಾತನಾಡಿದ ರಾಜಣ್ಣ, ನನ್ನ ಅನುಭವದ ಪ್ರಕಾರ ನಾನು ಸಿಎಂ ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದೇನೆ. ಸಿಎಂ ಇಷ್ಟೊಂದು ಅಸಹಾಯಕರಾಗಿದ್ದಾರೆ ಅನ್ನೋದನ್ನ ನೋಡಿದ್ರೆ ಅವರ ಮೇಲೆ ಯಾರಾದ್ರು ಮಾಟ ಮಂತ್ರ ಮಾಡಿದ್ದಾರೋ ಎನೋ ಅನ್ನಿಸುತ್ತಿದೆ. ಆ ಬಗ್ಗೆ ನಾನು ವಿಚಾರ ಮಾಡುತ್ತಿದ್ದೇನೆ ಎಂದರು.
ಅದರ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ. ಮನುಷ್ಯರ ಮೇಲೆ ಪರಿಣಾಮ ಆಗಬೇಕು ಅಂದ್ರೆ ಅವರು ಆಸ್ತಿಕರಾಗಿರಬೇಕು ಅಂತ ಇಲ್ಲ. ಸಿಎಂ ಹಾಗೂ ನಾನು ಮಾಟ ಮಂತ್ರದಲ್ಲಿ ನಂಬಿಕೆ ಇಲ್ಲದವರು. ನಾನು ಸಿಎಂ ಅವರು ಅಸಹಾಯಕರು ಅಂತಾ ಹೇಳಿದ ಮೇಲೆ ಅವರು ಕರೆದು ಮಾತನಾಡಿದ್ದಾರೆ. ಗಟ್ಟಿಯಾಗಿ ನಿಲ್ಲಿ ಅಂತ ಹೇಳಿಸಿಕೊಳ್ಳುವಷ್ಟು ಅಸಹಾಯಕತೆ ಸಿಎಂಗೆ ಬಂದಿಲ್ಲ ಎಂದು ಹೇಳಿದರು.
