0 Shares

ಬೆಂಗಳೂರು : ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ಯಲಹಂಕ ಪ್ರದೇಶದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸ್ಥಳೀಯ ಮಟ್ಟದಲ್ಲಿ ಸಮಗ್ರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ, ಯಲಹಂಕದ ನ್ಯಾಯಾಂಗ ಬಡಾವಣೆಯ ರೈಲ್ವೆ ಅಂಡರ್‌ಪಾಸ್‌ ಅನ್ನು ವೀಕ್ಷಿಸಿದ ಆಯುಕ್ತರು, ಸ್ಥಳೀಯ ನಿವಾಸಿಗಳಿಂದ ಬಂದಿರುವ ಮನವಿಗಳನ್ನು ಗಮನಿಸಿ, ಅಂಡರ್‌ಪಾಸ್‌ನ ಆಳವನ್ನು ಹೆಚ್ಚಿಸುವ ಅಗತ್ಯವಿರುವುದಾಗಿ ಅಭಿಪ್ರಾಯಿಸಿದರು. ವಾಹನ ಸಂಚಾರದ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಈ ಕಾಮಗಾರಿಯನ್ನು ಕೈಗೊಳ್ಳಲು ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ, ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯ ಸರಕಾರದ ವಿಶೇಷ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಪಟ್ಟಂತೆ ನ್ಯಾಯಾಂಗ ಬಡಾವಣೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಜಲಾವೃತ ಸಮಸ್ಯೆಗೆ ತಾಂತ್ರಿಕ ಕ್ರಮ ಕೈಗೊಳ್ಳಿ – ತದನಂತರ, ಯಲಹಂಕದ ಕಾಫಿ ಡೇ ಅಂಡರ್‌ಪಾಸ್‌ನ್ನು ಪರಿಶೀಲಿಸಿದ ಆಯುಕ್ತರು, ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ನೀರು ಸಂಗ್ರಹವಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿದರು. ಜಲಾವೃತ ಸಮಸ್ಯೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದಲ್ಲದೆ, ಸಾರ್ವಜನಿಕರ ಸುರಕ್ಷತೆಗೂ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ, ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಮರ್ಪಕ ಡ್ರೆನೇಜ್ ವ್ಯವಸ್ಥೆ ಕಲ್ಪಿಸಿ, ನೀರು ಸರಾಗವಾಗಿ ಹರಿಯಲು ಅನುವು ಮಾಡಿ – ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಮರ್ಪಕ ಡ್ರೆನೇಜ್ ವ್ಯವಸ್ಥೆ, ನೀರಿನ ಹೊರಹರಿವು ವ್ಯವಸ್ಥೆಯ ಸುಧಾರಣೆ ಹಾಗೂ ನಿಯಮಿತ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದ್ದು, ತಕ್ಷಣ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಏರ್ಪೋರ್ಟ್ ಮಾರ್ಗದ ಸ್ವಚ್ಛತೆಗೆ ಕಟ್ಟುನಿಟ್ಟಿನ ಸೂಚನೆ – ಏರ್‌ಪೋರ್ಟ್ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸ್ವಚ್ಛತೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ (NHAI) ಸಮನ್ವಯ ಮಾಡಿಕೊಂಡು. ಆ ಮಾರ್ಗದಲ್ಲಿ ನಿರಂತರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಯಲಹಂಕ ವ್ಯಾಪ್ತಿಯ BSWML ಸಹಾಯಕ ಪ್ರಧಾನ ವ್ಯವಸ್ಥಾಪಕರಿಗೆ (AGM) ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜೊತೆಗೆ, ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ ವೇಳೆ ಮಾರ್ಷಲ್‌ಗಳ ಮೂಲಕ ಪೆಟ್ರೋಲಿಂಗ್ ವ್ಯವಸ್ಥೆಯನ್ನು ಬಲಪಡಿಸಿ, ರಾತ್ರಿ 1 ಗಂಟೆಯವರೆಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ನಗರದಲ್ಲಿ ಇಂತಹ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರ ಅನುಕೂಲತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಅಗತ್ಯ ಕ್ರಮಗಳನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು. ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಕಾರ್ಯಪಾಲಕ ಅಭಿಯಂತರರಾದ ಸುಧಾಕರ್ ರೆಡ್ಡಿ ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.

0 Shares

By admin

Leave a Reply

Your email address will not be published. Required fields are marked *