0 Shares

ದೇವನಹಳ್ಳಿ : ಬೈಪಾಸ್​​ನ ಖಾಸಗಿ ಅಪಾರ್ಟ್ಮೆಂಟ್ನ ಯುವಕನೋರ್ವ 9 ಮಹಡಿಗಳ ಬಿಲ್ಡಿಂಗ್ ಏರಿ ಹೈಡ್ರಾಮಾ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ ಆನಂದ್ ಪೋಕ್ಸೋ ಕೇಸ್​ನಲ್ಲಿ ಈಗಾಗಲೇ ಜೈಲೂಟದ ರುಚಿ ತಿಂದು ಇತ್ತೀಚೆಗಷ್ಟೇ ವಾಪಸಾಸಿದ್ದ ಬೆನ್ನಲ್ಲೇ ಮತ್ತೊಂದು ಅವಾಂತರ ಸೇಷ್ಟಿಸಿದ್ದಾನೆ. ನಿನ್ನೆ (21 ಏಪ್ರಿಲ್) ಮಧ್ಯಾಹ್ನ 12 ಗಂಟೆಯಿಂದಲೇ ಕೆಳಗೆ ಹಾರುವುದಾಗಿ ಬೆದರಿಕೆ ಹಾಕುತ್ತಿದ್ದವನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಆತನ ಹುಚ್ಚಾಟದ ಹಿಂದಿನ ಕಾರಣ ಬಹಿರಂಗವಾಗಿದೆ.

ಆನಂದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಕಾಲೋನಿಯ ನಿವಾಸಿ. ಶಾಲಾ ಕಾಲೇಜು ದಿನಗಳಲ್ಲಿಯೇ ಅದೇ ಏರಿಯಾದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು 2023 ರಲ್ಲಿ ಪ್ರೀತಿಸಿದ್ದ. ಕದ್ದು ಮುಚ್ಚಿ ಮದುವೆಯೂ ಆಗಿದ್ದ. ಅಪ್ರಾಪ್ತೆಯನ್ನು ಮದುವೆಯಾಗಿದ್ದಕ್ಕೆ ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿ ಜೈಲು ಸೇರಿದ್ದ. ಆದರೆ ಆರೋಪಿ ಆನಂದ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಆಗಿದ್ದು ಆಗಿಹೋಯ್ತು ಎಂದು ಜೈಲಿನಿಂದ ಹೊರಬಂದ ನಂತರ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ.

ಹೀಗಿದ್ದರೂ ಆತನಿಗೆ ಸಮಾಧಾನವಿರಲಿಲ್ಲ. ಮತ್ತೆ ಅದೇ ಹುಡುಗಿಯ ಬಗ್ಗೆ ತಲೆಕೆಡಿಸಿಕೊಂಡಿದ್ದ. ಇದೇ ವಿಚಾರದಲ್ಲಿ ಹುಡುಗಿ ಕಡೆಯವರು ಮತ್ತೆ ಆನಂದ್ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಇತ್ತೀಚಿಗೆ ಗಲಾಟೆ ಕೇಸಲ್ಲೂ ಪೊಲೀಸರು ಕರೆದು ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಇದೆಲ್ಲದರಿಂದ ಮನನೊಂದ ಆತ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವನಹಳ್ಳಿ ಬೈಪಾಸ್ ಬದಿಯಲ್ಲಿರೋ ಖಾಸಗಿ ಅಪಾರ್ಟ್ಮೆಂಟ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ತನಗೆ ನ್ಯಾಯ ಬೇಕು, ಸ್ಥಳಕ್ಕೆ ಡಿಸಿ, ಕಮಿಷನರ್ ಬರಲೇಬೇಕು ಅಂತ ಪಟ್ಟು ಹಿಡಿದಿದ್ದ.

ಈ ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಎಸ್​ಡಿಆರ್​ಎಫ್ ತಂಡ ಸ್ಥಳಕ್ಕಾಗಮಿಸಿ ಯುವಕನನ್ನು ಮನವೊಲಿಸಲು ಹರಸಾಹಸಪಟ್ಟಿದ್ದಾರೆ. ಸಂಜೆ 7 ಗಂಟೆಯಾದರೂ ಆನಂದ್ ಇಳಿಯಲು ಸಮ್ಮತಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾತುಕತೆ ನಡೆಸಿ, ಅವನ ಬೇಡಿಕೆಗಳನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ. ಕೊನೆಗೆ ಸುಮಾರು ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಸಾಧ್ಯವಾಗಿದ್ದು, ಬಳಿಕ ದೇವನಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕೆಳಗೆ ಬಂದ ಆನಂದ್ ಮಾಧ್ಯಮಗಳೊಂದಿಗೆ ಮಾತನಾಡಿ ತಾನು ಯಾವುದೇ ಹೈಡ್ರಾಮ ಮಾಡಿಲ್ಲ. ನನಗೆ ಬಹಳ ತೊಂದರೆ ಕೊಟ್ಟಿದ್ದಾರೆ. ಲವ್ ಮ್ಯಾಟರ್ ಅಲ್ಲಿ ನನ್ನ ಮೇಲೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ರು. ಅದನ್ನ ವಾಪಾಸ್ ತಗೋಬೇಕು ಅಂತ ಹೀಗೆ ಮಾಡಿದ್ದೇನೆ ಎಂದಿದ್ದಾನೆ.

0 Shares

By admin

Leave a Reply

Your email address will not be published. Required fields are marked *