0 Shares

ಬೆಂಗಳೂರು : ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಜೈಲಿನಲ್ಲಿಯೇ ಸಂಚೂರೂಪಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಲಷ್ಕರ್-ಎ-ತೈಬಾ ಸಂಘಟನೆಯ ಸದಸ್ಯ ಟಿ. ನಾಸೀರ್ ಸೇರಿದಂತೆ ಏಳು ಆರೋಪಿಗಳಿಗೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯವು ಏಳು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಸೀರ್ ಸೇರಿ ಸಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸಯ್ಯದ್ ಮುದಸ್ಸಿರ್ ಪಾಶಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್​​ ಶಿಕ್ಷೆಗೆ ಒಳಪಟ್ಟವರಾಗಿದ್ದು, 48,000 ದಂಡವನ್ನೂ ವಿಧಿಸಲಾಗಿದೆ.

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಾಸೀರ್ ನೇತೃತ್ವದಲ್ಲಿ ಲಷ್ಕರ್-ಎ-ತೈಬಾ ಸಂಪರ್ಕಿತ ಉಗ್ರ ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗಳು ಈಗಾಗಲೇ ತಪ್ಪೊಪ್ಪಿಕೊಂಡಿದ್ದರು. ಈ ಸಂಚಿನಲ್ಲಿ ಜೈಲಿನಲ್ಲಿ ಇರುವ ಯುವಕರನ್ನು ಗುರುತಿಸಿ, ನೇಮಕ ಮಾಡಿ, ತರಬೇತಿ ನೀಡಿ, ಮತಾಂತರಗೊಳಿಸಿ, ಉಗ್ರವಾದದತ್ತ ಆಕರ್ಷಿಸಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಆರೋಪಿಗಳು ಯೋಜಿಸಿದ್ದರು. 2023ರ ಜುಲೈನಲ್ಲಿ ಶಸ್ತ್ರಾಸ್ತ್ರಗಳು, ಗುಂಡುಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಈ ಬಗ್ಗೆ ಪ್ರಕರಣ ದಾಖಲಿಸಿತ್ತು.

ಆರೋಪಿಗಳು ಬೆಂಗಳೂರಿನಲ್ಲಿಯೂ ಉಗ್ರ ದಾಳಿಗಳನ್ನು ನಡೆಸುವ ಯೋಜನೆ ರೂಪಿಸಿದ್ದರು ಎಂಬುದು ಬಯಲಾದ ಕಾರಣ, ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಟಿ. ನಾಸೀರ್ ಅದಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಎಂಬುದಿಲ್ಲಿ ಗಮನಾರ್ಹ. ಬಂಧಿತರಲ್ಲಿ ಸಲ್ಮಾನ್ ಖಾನ್ ಎಂಬಾತನನ್ನು ರುವಾಂಡಾ ಗಣರಾಜ್ಯದಿಂದ ಹಸ್ತಾಂತರದ ಮೂಲಕ ಭಾರತಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ 11 ಮಂದಿ ಬಂಧಿತ ಆರೋಪಿಗಳು ಹಾಗೂ ಪರಾರಿಯಾಗಿರುವ ಜುನೈದ್ ಅಹ್ಮದ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

0 Shares

By admin

Leave a Reply

Your email address will not be published. Required fields are marked *