ದೆಹಲಿ : “ಬಿಜೆಪಿಯವರ ಹೋರಾಟ ಏನಿದ್ದರೂ ರಾಜಕೀಯಕ್ಕಾಗಿ ಹೊರತು ಜನರ ಹಿತಕ್ಕಾಗಿ ಇಲ್ಲ. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆಶಿ ಪ್ರತಿಕ್ರಿಯೆ ನೀಡಿದರು.
ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಆದೇಶಕ್ಕೆ ಎಲ್ಲಿ ಲೆಕ್ಕಕ್ಕೆ ಇದೆ? ಕೇಂದ್ರ ಸರ್ಕಾರ ದರ ಏರಿಕೆಗೆ ತಡೆ ಹಿಡಿಯಬಹುದಾಗಿತ್ತಲ್ಲವೇ? ಬಿಜೆಪಿ ನಾಯಕರು ಯಾವ ಕಾನೂನಿನ ಅಡಿಯಲ್ಲಿ ಇದನ್ನು ತಡೆದಿದ್ದಾರೆ ಎಂದು ಹೇಳಲಿ. ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ ಅಷ್ಟೇ. ಅವರು ಕೇಂದ್ರ ಮಂತ್ರಿ ಭೇಟಿ ಮಾಡಿರಬಹುದು, ಆದರೆ ದರ ಏರಿಕೆ ತಡೆಯುವ ಯಾವ ರೀತಿಯ ಹಕ್ಕು ಅವರಿಗೆ ಇಲ್ಲ” ಎಂದು ತಿಳಿಸಿದರು.
“ರಾಜಕೀಯದಲ್ಲಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು, ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಅವರಿಂದ ಕರ್ನಾಟಕ ರಾಜ್ಯಕ್ಕೆ 1 ರೂಪಾಯಿ ಅನುದಾನ ತರಲು ಆಗಿಲ್ಲ. ಬೆಂಗಳೂರಿಗೆ ಒಂದು ಯೋಜನೆ ತರಲು ಆಗಲಿಲ್ಲ. ಹೀಗಾಗಿ ಮಾತನಾಡುತ್ತಾರೆ, ಮಾಧ್ಯಮಗಳು ಅವರನ್ನು ದೊಡ್ಡ ನಾಯಕನಂತೆ ಬಿಂಬಿಸುತ್ತಿದ್ದೀರಿ. ಅವರಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ. ಹೀಗಾಗಿ ಬೇರೆಯವರು ಯಾರೂ ಅವರಿಗೆ ಬೆಂಬಲ ನೀಡುತ್ತಿಲ್ಲ” ಎಂದು ತಿರುಗೇಟು ನೀಡಿದರು.
ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ಎಐಸಿಸಿ ನಾಯಕರು ಒಂದು ಸಭೆ ನಿಗದಿಪಡಿಸಿದ್ದಾರೆ. ವಿವಿಧ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಚರ್ಚೆಗೆ ಕರೆದಿದ್ದಾರೆ” ಎಂದರು. ನಾಯಕರನ್ನು ಒನ್ ಟು ಒನ್ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ದೆಹಲಿಗೆ ಬಂದ ನಂತರ ಯಾರೆಲ್ಲಾ ಬಿಡುವಾಗಿರುತ್ತಾರೆ, ಸಮಯ ನೀಡುತ್ತಾರೋ ಅವರನ್ನು ಭೇಟಿ ಮಾಡುತ್ತೇನೆ. ನಾನು ಯಾವುದೇ ನಾಯಕರನ್ನು ಕೇಳಿಲ್ಲ” ಎಂದು ತಿಳಿಸಿದರು.
