0 Shares

ಬೆಂಗಳೂರು : ದಾವಣಗೆರೆ ದಕ್ಷಿಣ ಉಪ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಒಳಜಗಳ ಭುಗಿಲೆದ್ದಿದೆ. ದಾವಣೆಗರೆ ಬೈ ಎಲೆಕ್ಷನ್​​ನಲ್ಲಿ ಟಿಕೆಟ್ ಕೃತಪ್ಪಿದ್ದಕ್ಕೆ ಕಲ ಮುಸ್ಲಿಂ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಕೆಲಸ ಮಾಡಿಲ್ಲ. ಬದಲಿಗೆ ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಆರೋಪ ಬೆನ್ನಲ್ಲೇ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

ಅಲ್ಲದೇ ನಾಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಬುಡಕ್ಕೆ ಬಂದಿದೆ. ಇದರಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್​​ ವಿರುದ್ಧ ಸಿಡಿದೆದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಪಾಠ ಕಲಿಸುತ್ತೇವೆಂದು ಎಚ್ಚರಿಕ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಸತೀಶ್ ಜಾರಕಿಹೊಳಿ ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿದ್ದು, ಜಬ್ಬರ್ ಅವರ ಮೇಲಿನ ಕ್ರಮದ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಾಗಿಯೂ ಸಹ ಹೇಳಿದ್ದಾರೆ.

ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಬೇಸರಗೊಂಡಿರುವ ಸತೀಶ್ ಜಾರಕಿಹೊಳಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಮೊದಲೇ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಂಬಂಧ ಅಷ್ಟಕಷ್ಟೇ. ಇಬ್ಬರೂ ಒಂದೇ ಪಕ್ಷದ ನಾಯಕರಾಗಿದ್ದರೂ ಸಹ ಸತೀಶ್‌ ಜಾರಕಿಹೊಳಿ ಕರ್ನಾಟಕ ಕಾಂಗ್ರೆಸ್‌ನ ಕೇಂದ್ರವಾಗಿದ್ದರೆ, ಡಿಕೆ ಶಿವಕುಮಾರ್ ಸಹ ಮತ್ತೊಂದು ಕೇಂದ್ರ. ಹೀಗೆ ಇಬ್ಬರೂ ಪ್ರಭಾವಿಗಳು. ಅಷ್ಟೇ ಅಲ್ಲ ರಾಜಕೀಯ ವಿಚಾರದಲ್ಲಿ ಇಬ್ಬರೂ ತಮ್ಮದೇ ನಡೆಯಬೇಕೆನ್ನುವ ಹಠವಾದಿಗಳು. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್‌ ಅವರಿಗೆ ಯಾರಾದರೂ ಪ್ರಬಲ ಟಕ್ಕರ್‌ ಕೊಡಬಲ್ಲರು ಅಂದ್ರೆ ಅದು ಸತೀಶ್‌ ಜಾರಕಿಹೊಳಿ.

ಅಷ್ಟೇ ಅಲ್ಲ ಸಿದ್ದರಾಮಯ್ಯನವರ ಪರವಾಗಿ ನಿಂತು ಡಿಕೆಶಿ ವಿರುದ್ಧ ಮಾತನಾಡುವ ನಾಯಕ ಅಂದ್ರೆ ಅದು ಸತೀಶ್ ಜಾರಕಿಹೊಳಿ. ಡಿಕೆಶಿ ಹಾಗೂ ಅವರ ಬಣ ಸಿಎಂ ಬದಲಾವಣೆ ಧ್ವನಿ ಎತ್ತಿದಾಗಲೆಲ್ಲ ಸಿದ್ದರಾಮಯ್ಯನವರ ಪರವಾಗಿ ನಿಂತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದೂ ಉಂಟು. ಹೀಗಿರುವಾಗ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಭೇಟಿ ಮಾಡಿದ್ದು, ಅಬ್ದುಲ್ ಜಬ್ಬಾರ್ ಅವರ ಅಮಾನತು ವಾಪಸ್ ತೆಗೆದುಕೊಳ್ಳುವಂತೆ ಡಿಕೆಶಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ಹೋಗುವುದಾಗಿಯೂ ಪರೋಕ್ಷವಾಗಿ ತಮ್ಮದೇ ಸಂದೇಶವೊಂದನ್ನ ರವಾನಿಸಿದ್ದಾರೆ.

ಸತೀಶ್‌ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್‌ ಭೇಟಿ ಸೌಜನ್ಯಯುತ ಭೇಟಿ ಎಂದು ಬಣ್ಣಿಸಲಾಗಿದೆ. ಆದ್ರೆ, ಇದು ಸೌಜನ್ಯಯುತ ಭೇಟಿ ಅಲ್ಲ ಕಾಂಗ್ರೆಸ್‌ನಲ್ಲಿ ಸದ್ಯ ಭುಗಿಲೆದ್ದಿರುವ ಮುಸ್ಲಿಂ ನಾಯಕರ ಅಸಮಾಧಾನದ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಅಬ್ದುಲ್ ಜಬ್ಬಾರ್ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ಬೆಳವಣಿಗೆಗಳು ಮಾರಕವಾಗಹುದು ಎನ್ನುವುದನ್ನು ಸಹ ಸತೀಶ್ ಜಾರಕಿಹೊಳಿ, ಡಿಕೆಶಿ ಗಮನಕ್ಕೆ ತಂದಿದ್ದಾರೆ. ಇನ್ನು ಅಬ್ದುಲ್ ಜಬ್ಬಾರ್ ಅವರನ್ನ ವಾಪಸ್ ಕರೆದುಕೊಳ್ಳಬೇಕೆಂದು ಹೇಳಿದ್ದೇನೆಂದು ಸ್ವತಃ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಮುಂದಿನ ವಾರ ಹೈಕಮಾಂಡ್ ಭೇಟಿ ಮಾಡುವುದಾಗಿಯೂ ಸಹ ಹೇಳಿದ್ದಾರೆ. ಇದರೊಂದಿಗೆ ಸಾಹುಕಾರ, ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿದ್ದಾರೆ.

ಇನ್ನು ನಿನ್ನೆ (ಏಪ್ರಿಲ್ 16) ನಡೆದ ಸಚಿವ ಸಂಪುಟದಲ್ಲೂ ಸಹ ಮುಸ್ಲಿಂ ನಾಯಕರ ಮೇಲಿನ ಕ್ರಮದ ಬಗ್ಗೆ ಪ್ರಸ್ತಾಪಿಸಿ ಬೇಸರ ಹೊರಹಾಕಿದ್ದಾರೆ. ನಾವು ಮುಸ್ಲಿಂ ಸಮುದಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರೆ, ಅಬ್ದುಲ್ ಜಬ್ಬಾರ್ ಮೇಲೆ ಕ್ರಮ ಕೈಗೊಂಡಿದ್ದು ತೀರಾ ಅವಸರದ ನಿರ್ಧಾರ. ಇದು ಸಮುದಾಯವೇ ನಮಗೆ ಸವಾಲು ಹಾಕುವಂತೆ ಮಾಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಪರೋಕವಾಗಿ ಎಚ್ಚರಿಸಿದ್ದಾರೆ.

ಅಬ್ದುಲ್ ಜಬ್ಬಾರ್ ಅವರ ಅಮಾನತು ವಾಪಸ್ ಪಡೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸತೀಶ್ ಜಾರಕಿಹೊಳಿ ಸಲಹೆ ಕೊಟ್ಟಿದ್ದಾರೆ. ಒಂದು ವೇಳೆ ಸಸ್ಪೆಂಡ್ ವಾಪಸ್ ಪಡೆಯದಿದ್ದರೆ ಜಾರಕಿಹೊಳಿ ಹೈಕಮಾಂಡ್ ನಾಯಕರ ಭೇಟಿಗೂ ಸಿದ್ಧವಾಗಿ ನಿಂತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. ಮುಂದಿನ ವಾರ ದೆಹಲಿಗೆ ತೆರಳಿ ಹೈಕಮಾಂಡ್​​ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೊಂದಿಗೆ ಜಾರಕಿಹೊಳಿ ಮುಸ್ಲಿಂ ನಾಯಕರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ.

0 Shares

By admin

Leave a Reply

Your email address will not be published. Required fields are marked *