ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಮತ್ತೆ ನಿರ್ಬಂಧಗಳನ್ನು ಹೇರಿದೆ. ನಿರ್ಣಾಯಕ ಜಲಮಾರ್ಗವನ್ನು ಮತ್ತೆ ತೆರೆಯುವ ತನ್ನ ನಿರ್ಧಾರವನ್ನು ಇರಾನ್ ಹಿಂತೆಗೆದುಕೊಂಡಿದೆ. ಅಮೆರಿಕ ಕದನ ವಿರಾಮವನ್ನು ಉಲ್ಲಂಘಿಸಿರುವ ಕಾರಣದಿಂದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಲಾಗುತ್ತಿದೆ ಎಂದು ಇರಾನ್ ಆರೋಪಿಸಿದೆ.
ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅಮೆರಿಕ ಹೇಳಿದ ನಂತರ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯ ಮೇಲೆ ನಿರ್ಬಂಧ ಹೇರಿದೆ. ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಾಟವನ್ನು ನಿರ್ಬಂಧಿಸುವುದಾಗಿ ಇರಾನ್ ಎಚ್ಚರಿಸಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ನಡುವೆ ಲೆಬನಾನ್ನಲ್ಲಿ 10 ದಿನಗಳ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಇರಾನ್ ನಿನ್ನೆ ಹೇಳಿತ್ತು. ಆದರೂ ಇರಾನ್ನ ಹಡಗುಗಳ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ ನಂತರ ಇರಾನ್ ಅಧಿಕಾರಿಗಳು ಈ ಕ್ರಮವು ಕಳೆದ ವಾರದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ವಿಶೇಷವಾಗಿ ತೈಲ ಸಾಗಣೆಗೆ ಈ ಜಲಮಾರ್ಗ ಅತ್ಯಂತ ಮುಖ್ಯವಾಗಿದೆ. ಇಲ್ಲಿನ ನಿರ್ಬಂಧ ಜಾಗತಿಕ ಮಾರುಕಟ್ಟೆಗಳು ಮತ್ತು ಇಂಧನ ಬೆಲೆಗಳ ಮೇಲೆ ಮತ್ತೆ ಪರಿಣಾಮ ಬೀರಬಹುದು.
