0 Shares

ಬೆಂಗಳೂರು : ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು ಸಾಮಾನ್ಯ ವಿಚಾರ ಅಲ್ಲ. ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದು ಕಿಡಿಕಾರಿದರು.

ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ತೀರ್ಮಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆ ವಿಫಲತೆ ಅಲ್ಲ. ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದರು.

ಮಹಿಳಾ ಮೀಸಲು ಮಸೂದೆ ಸರ್ವಾನುಮತದಿಂದ ಬೆಂಬಲ ಸಿಗಬೇಕಿತ್ತು. ಆದರೆ ಬೆಂಬಲ ನೀಡದೆ ವಿಧಾನಸಭೆಗೆ, ಸಂಸತ್ತಿಗೆ ಹೋಗುತ್ತೇವೆ ಎಂಬ ಮಹಿಳೆಯರ ಕನಸನ್ನು ನುಚ್ಚು ನೂರು ಮಾಡಿದೆ. ಮಹಿಳೆಯರ ಶಾಪ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ತಟ್ಟದೇ ಬಿಡುವುದಿಲ್ಲ ಎಂದರು.

ಕಳೆದ 70 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್, ಮಹಿಳೆಯ ಹಕ್ಕಿನ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿತು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಮೀಸಲು ಮಸೂದೆಗೆ ಬೆಂಬಲ ಕೊಡುವ ಧೈರ್ಯ ಇಲ್ಲದ ಮೇಲೆ ಮಹಿಳೆಯರ ಬಗ್ಗೆ ಮಾತನಾಡುವ ಅಧಿಕಾರವೂ ಕಾಂಗ್ರೆಸ್‍ಗೆ ಇಲ್ಲ. ಆದ್ದರಿಂದ ಮಹಿಳಾ ಕಾಂಗ್ರೆಸ್ ಘಟಕವನ್ನು ರದ್ದು ಮಾಡಿ ಎಂದು ಹೇಳಿದರು.

ಕಾಂಗ್ರೆಸ್ಸಿಗರೇ ಇನ್ನೆಷ್ಟು ಕಾಲ ದಿನ, ವರ್ಷ ಮಹಿಳೆಯರನ್ನು ಕೇವಲ ಮತದಾರರಾಗಿ ಬಳಸುತ್ತೀರಿ. ಮಹಿಳೆಯರು ದುರ್ಬಲರು ಎಂದುಕೊಂಡು ನೆಹರು, ಇಂದಿರಾ, ಸೋನಿಯಾ ರಾಜ್ಯಭಾರ ಮಾಡಿದ್ದರಲ್ಲ. ಆಗ ನಿಮಗೆ ಅವರ ಶಕ್ತಿ ಬಗ್ಗೆ ತಿಳಿಯಲಿಲ್ಲವೇ ಎಂದರು. ಮಹಿಳಾ ಮೀಸಲಿಗೆ ಮೋದಿ ಅವರು ಮುಂದಾದರೆ ವಿರೋಧಿಸಿ ಹೀನ ಕಾರ್ಯ ಮಾಡಿದ್ದೀರಿ. ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ವಿರೋಧಿ ನೀತಿ ಎಂದು ಟೀಕಿಸಿದರು.

ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ಸಿಗುವಂತೆ ಮಾಡಲು ಅವಕಾಶ ಇತ್ತು. ಆದರೆ ಕಾಂಗ್ರೆಸ್‍ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಈ ಬಗ್ಗೆ ಚರ್ಚೆ ಮಾಡಬಹುದಿತ್ತು. ಹಿಂದೆ ಹಲವು ಬಾರಿ ಕ್ಷೇತ್ರ ಮರುವಿಂಗಡಣೆ ಆದಾಗ ಅವರು ವಿರೋಧಿಸಲಿಲ್ಲ. ಇದೇ ಮೊದಲ ಬಾರಿಗೆ ಆಗಿಲ್ಲ. ಆಗಲೂ ಸಂಸತ್ ಸೀಟು ಹೆಚ್ಚಳ ಆಗಿದೆ. ಆಗ ಇವರು ಬಾಯಿಗೆ ಬಟ್ಟೆ ತುರುಕಿಕೊಂಡಿದ್ದರೇ ಎಂದು ಕಿಡಿಕಾರಿದರು.

ಹಿಂದೆ ತಲಾಖ್ ಸಂಬಂಧವೂ ಕಾಂಗ್ರೆಸ್ ವಿರೋಧ ಮಾಡಿತ್ತು. ದೇಶದ ಭದ್ರತೆ ಆರ್ಟಿಕಲ್ 370 ತಂದಾಗಲೂ ವಿರೋಧ ಮಾಡಿದ್ದರು. ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ವಿರೋಧಿಸಿದ್ದರು. ದೇಶದ ಒಳಿತಿಗಾಗಿ ಏನೆಲ್ಲ ಮಾಡಿದ್ದರೂ ಇವರು ವಿರೋಧಿಸಿದ್ದಾರೆ. ಕಾಂಗ್ರೆಸ್‍ನ ಮಾಡಿದ್ದು ಅಕ್ಷಮ್ಯ ಅಪರಾಧ. ಮಹಿಯರ ಭವಿಷ್ಯ ನಿರ್ಮಾಣಕ್ಕೆ ನೆರವಾಗಬೇಕಿದ್ದ ಮಸೂದೆಗೆ ತಡೆ ಒಡ್ಡಿ ಕರಾಳ ದಿನವಾಗಿ ಕಾಂಗ್ರೆಸ್ ಮಾಡಿದೆ ಎಂದು ಟೀಕಿಸಿದರು.‌

ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ ಉಪಸ್ಥಿತರಿದ್ದರು.

0 Shares

By admin

Leave a Reply

Your email address will not be published. Required fields are marked *