0 Shares

ಬೆಂಗಳೂರು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬೆಳವಣಿಗಳು ನಡೆದಿದೆ. ಕಾಂಗ್ರೆಸ್​​ ಆಂತರಿಕ ಕಚ್ಚಾಟಕ್ಕೆ ರಾಜೀನಾಮೆ ಮೂಲಕ ತೆರೆ ಬೀಳುವ ಸಾಧ್ಯತೆ ಇದೆ. ದಾವಣಗೆರೆ ಚುನಾವಣೆ ಪ್ರಚಾರದಲ್ಲಿ ನಡೆದ ಘಟನೆಗಳು ಹಾಗೂ ಸಂಪೂರ್ಣ ಆಂತರಿಕ ವರದಿ ಕಾಂಗ್ರೆಸ್ ಹೈಕಮಾಂಡ್ ಕೈಸೇರಿದೆ.

ಇದೀಗ ಈ ವರದಿ ಹೈಕಮಾಂಡ್​​ ಕೈಸೇರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿದೆ. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ವರದಿಯ ಬೆನ್ನಲ್ಲೇ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶಿಸ್ತು ಕ್ರಮದ ತೂಗುಕತ್ತಿ ನೇತಾಡುತ್ತಿದೆ.

ಉಪಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ನಾಯಕರ ನಡುವಿನ ಮುನಿಸು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕವನ್ನು ವರದಿ ಎತ್ತಿ ತೋರಿಸಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಕೆಲವು ಶಾಸಕರೇ ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದು, ಸಚಿವ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಆ್ಯಕ್ಷನ್ ಆರಂಭವಾಗುವ ಸೂಚನೆ ಸಿಗುತ್ತಿದ್ದಂತೆಯೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷವು ಸಸ್ಪೆಂಡ್ ಮಾಡುವ ಮುನ್ಸೂಚನೆ ಅರಿತ ಜಬ್ಬಾರ್, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಜೀರ್ ಅಹ್ಮದ್ ಅವರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎನ್ನಲಾಗಿದೆ.

ಸದ್ಯದ ಬೆಳವಣಿಗೆಗಳು ಸಚಿವ ಜಮೀರ್ ಅಹ್ಮದ್ ಅವರನ್ನೇ ಗುರಿಯಾಗಿಸಿಕೊಂಡಿವೆ. ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಜಮೀರ್ ಅವರ ‘ತಲೆದಂಡ’ವಾಗುವುದು ಬಹುತೇಕ ನಿಶ್ಚಿತ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿಬರುತ್ತಿವೆ. ಇತ್ತ ಈ ಭಾರಿ ಬೆಳವಣಿಗೆಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತರ ಕಾಯ್ದುಕೊಂಡಿದ್ದಾರೆ. ದಾವಣಗೆರೆ ವಿದ್ಯಮಾನ ಮತ್ತು ರಾಜೀನಾಮೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೇನೂ ಗೊತ್ತಿಲ್ಲ” ಎನ್ನುವ ಮೂಲಕ ಜಾಣ್ಮೆಯ ಮೌನ ವಹಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *