0 Shares

ಬೆಂಗಳೂರು : ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವ ಕುರಿತು ರಾಜ್ಯ ಸರಕಾರದ ಪ್ರಸ್ತಾವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ಒಂದು ಲಕ್ಷ ರೂ. ದಂಡ ವಿಧಿಸಿದೆ.

ಮಾಧ್ಯಮಗಳ ವರದಿ ಆಧರಿಸಿ ಬೆಂಗಳೂರಿನ ಎಚ್‌.ಎನ್‌.ಚಂದನಾ ಮತ್ತು ಎಸ್‌ ವೆಂಕಟೇಶ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಶ್ರೇಣಿಗಳನ್ನು ನೀಡುವ ವ್ಯವಸ್ಥೆ ಕುರಿತ ಶಿಕ್ಷಣ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕಾ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಆ ಕುರಿತ ಸರಕಾರದ ಅಧಿಕೃತ ಆದೇಶದ ದಾಖಲೆಗಳನ್ನು ಒದಗಿಸಿಲ್ಲ. ಅರ್ಜಿದಾರರ ಈ ನಡೆ ಅತ್ಯಂತ ಅಗೌರವಯುತವಾಗಿದೆ.

ಇಂತಹ ಪತ್ರಿಕಾ ಹೇಳಿಕೆಗಳನ್ನು ರದ್ದುಗೊಳಿಸುವುದಕ್ಕೆ ಹೈಕೋರ್ಟ್‌ಗೆ ಅಸಾಧಾರಣವಾದ ವಿಶೇಷ ನ್ಯಾಯವ್ಯಾಪ್ತಿ ಚಲಾಯಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಇದೊಂದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ. ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು.

ಒಂದು ವೇಳೆ ಅರ್ಜಿದಾರರು ದಂಡದ ಮೊತ್ತ ಪಾವತಿಸದಿದ್ದಲ್ಲಿಅವರ ಭೂ ಕಂದಾಯಕ್ಕೆ ಬಾಕಿ ಮೊತ್ತವನ್ನಾಗಿ ಪರಿಗಣಿಸಿ ವಸೂಲಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿತು. ಅದಾದ ಬಳಿಕವೂ ಅರ್ಜಿದಾರರು ಮತ್ತೆ ವಾದ ಮುಂದುವರಿಸಿ ಹಿಂದಿ ಭಾಷೆ ತೆಗೆದು ಹಾಕಲಾಗುತ್ತದೆ ಎಂದು ವಿವರಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ”ಮೂರು ಸಾಲುಗಳ ಪತ್ರಿಕಾ ವರದಿ ಆಧರಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹಿಂದಿ ಭಾಷೆಯನ್ನು ತೆಗೆದುಹಾಕಲಾಗಿದೆ ಎಂಬುದಾಗಿ ಪತ್ರಿಕಾ ವರದಿಯಲ್ಲಿ ತಿಳಿಸಿಲ್ಲ.

ಜತೆಗೆ, ಸಚಿವರು ಹಿಂದಿ ಭಾಷೆ ತೆಗೆಯಬೇಕೆಂದು ಹೇಳಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದು ತಪ್ಪಾಗಿದ್ದು, ಅರ್ಜಿಯಲ್ಲಿಸೇರಿಸಲಾಗಿದೆ. ಈ ರೀತಿಯ ಅಂಶ ಪತ್ರಿಕೆಗಳ ವರದಿಯಲ್ಲಿ ಉಲ್ಲೇಖವಾಗಿಲ್ಲ. ಆದ್ದರಿಂದ ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತಿದೆ,” ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

0 Shares

By admin

Leave a Reply

Your email address will not be published. Required fields are marked *