ಬೆಂಗಳೂರು : ಕರ್ನಾಟಕದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಂತೂ ಬಳಲಿ ಬೆಂಡಾಗಿವೆ. ಬೆಂಗಳೂರಿನಿಂದ ಬೆಳಗಾವಿವರೆಗೆ, ಬೀದರ್‌ನಿಂದ ಚಾಮರಾಜನಗರದವರೆಗೆ ಉಷ್ಣ ಅಲೆಗೆ ಜನ ಬೇಸತ್ತಿದ್ದಾರೆ. ರಣಬಿಸಿಲಿನಿಂದ ರಕ್ಷಣೆ ಪಡೆಯಲು ಜಿಲ್ಲಾಡಳಿತಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರೆ, ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ.
ಬಿಸಿಲ ತಾಪದಿಂದ ಬಚಾವಾಗಲು ‘ಗ್ರೀನ್ ನೆಟ್’ ಮೊರೆ, ಯಾದಗಿರಿಯಲ್ಲಿ ಬಿಸಿಲಿನ ತಾಪ ಎಷ್ಟಿದೆಯೆಂದರೆ, ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ನೆರಳು ನೀಡಲು ಸುಭಾಷ್ ವೃತ್ತದಲ್ಲಿ ‘ಗ್ರೀನ್ ನೆಟ್’ ಅಳವಡಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕೊಂಚ ನಿರಾಳತೆ ತಂದಿದೆ. ಇತ್ತ ಕಲಬುರಗಿಯಲ್ಲಿ ಜನ ಶಾಖದಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್‌ಗಳ ಮೊರೆ ಹೋಗುತ್ತಿದ್ದಾರೆ.
ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ – ರಾಯಚೂರಿನಲ್ಲಿ ಉಷ್ಣ ಅಲೆಯ ಪರಿಣಾಮ ನವಜಾತ ಶಿಶುಗಳ ಮೇಲೆ ಬೀರುತ್ತಿದ್ದು, ಮಕ್ಕಳಿಗೆ ಡಿಹೈಡ್ರೇಶನ್, ವಾಂತಿ-ಬೇಧಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮಕ್ಕಳನ್ನು ಹೊರಗೆ ಕರೆತರದಂತೆ ವೈದ್ಯರು ಎಚ್ಚರಿಸಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲಿನಿಂದ ಹೀಟ್ ಸ್ಟ್ರೋಕ್ಗೆ ತುತ್ತಾದವರಿಗಾಗಿ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್ ತೆರೆಯಲಾಗಿದೆ. ಬಿಸಿಲಿಗೆ ಹುತ್ತದೊಳಗೆ ಇರಲಾಗದೆ ಹಾವುಗಳು ಹೊರಬರುತ್ತಿರುವುದು ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಆತಂಕ ಮೂಡಿಸಿದೆ.
