ನವದೆಹಲಿ : ಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯಲ್ಲಿ ಗಂಭೀರ ಭದ್ರತಾ ಲೋಪ ಕಂಡುಬಂದಿದೆ. ಉತ್ತರ ಪ್ರದೇಶದ ನೋಂದಣಿ ನಂಬರ್ ಹೊಂದಿರುವ ಅಪರಿಚಿತ ಕಾರು ಗೇಟ್ ಅನ್ನು ಮುರಿದು ಒಳಗೆ ನುಗ್ಗಿದೆ. ಭದ್ರತಾ ಸಿಬ್ಬಂದಿ ನೋಡನೋಡುತ್ತಿದ್ದಂತೆ ಕಾರು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಆಫೀಸ್ ಬಳಿ ತೆರಳಿದೆ.
ಈ ಘಟನೆ ಕೋಲಾಹಲಕ್ಕೆ ಕಾರಣವಾಯಿತು. ಆ ಕಾರು, ಚಾಲಕ ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಗುರುತಿಸಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ದೆಹಲಿ ಪೊಲೀಸರ ಪ್ರಕಾರ, ಉತ್ತರ ಪ್ರದೇಶ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟಾಟಾ ಸಿಯೆರಾ ಕಾರು ಕಬ್ಬಿಣದ ಗೇಟ್ ಅನ್ನು ಮುರಿದು ವಿಧಾನಸಭಾ ಕಟ್ಟಡದ ಒಳಗೆ ನುಗ್ಗಿತು. ಒಳಗೆ ಬಂದ ಕಾರಿನಿಂದ ಇಳಿದ ಮುಸುಕುಧಾರಿ ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಅದರ ಹೊರಗೆ ಹೂವಿನ ಹೂಗುಚ್ಛ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಕಾರಿನಲ್ಲಿ ಏನಿತ್ತು, ಅದರ ಮಾಲೀಕರು ಯಾರು ಮತ್ತು ಅದರಲ್ಲಿ ಯಾರಿದ್ದರು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. “ಕಾರು ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಮುಖಮಂಟಪದ ಬಳಿ ಪುಷ್ಪಗುಚ್ಛವನ್ನು ಇರಿಸಿ ವಾಪಾಸ್ ತೆರಳಿದ್ದಾನೆ” ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಹೂಗುಚ್ಛದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಭದ್ರತೆಗಾಗಿ ವಿಐಪಿ ಗೇಟ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಂತರ ಚಾಲಕ ಪರಾರಿಯಾಗಿದ್ದಾನೆ.
ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಆರಂಭಿಸಿದ್ದು, ಚಾಲಕ ಮತ್ತು ಕಾರನ್ನು ಹುಡುಕುತ್ತಿದ್ದಾರೆ. ಈ ಘಟನೆಯು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಬಂದ ನಂತರ ಈ ಘಟನೆ ನಡೆದಿದೆ.
