ಬೆಂಗಳೂರು : ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ವಿವದಾತ್ಮಕ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕರ್ನಾಟಕ ಬಿಜೆಪಿ ದೂರು ನೀಡಿದೆ. ಶಾಸಕರಾದ ಸಿ.ಕೆ.ರಾಮಮೂರ್ತಿ, ಮುನಿರಾಜು ನೇತೃತ್ವದ ಬಿಜೆಪಿ ಇಂದು ಬೆಂಗಳೂರಿನ ಡಿಜಿ & ಐಜಿಪಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ನೀಡಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆ ಹಿಂಸೆಗೆ ಪ್ರಚೋದನೆ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಇಡೀ ದೇಶದಲ್ಲಿ ಪ್ರತಿಭಟನೆಗೆ ಬಿಜೆಪಿ ಸಜ್ಜಾಗಿದೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಂವಿಧಾನ ವಿರೋಧಿ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆಗೆ ನಿದ್ದೆ ಬರುತ್ತಿಲ್ಲ. ಕಣ್ಣು ಮುಚ್ಚಿದರೆ ಅವರಿಗೆ ಕಾಣಿಸುವುದು ಆರ್ ಎಸ್ ಎಸ್. ಆರ್ ಎಸ್ ಎಸ್ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಾರೆ. ಅವರು ನೆಮ್ಮದಿಯಿಂದ ನಿದ್ದೆ ಮಾಡಬೇಕೆಂದರೆ ದಯವಿಟ್ಟು ಆರ್ ಎಸ್ ಎಸ್ ಕಚೇರಿಗೆ ಹೋಗಿ ಅಲ್ಲಿ ಕೆಲಸ ಮಾಡಲಿ. ನಾಗಪುರಕ್ಕಾದರೂ ಹೋಗಲಿ ಅಥವಾ ಕೇಶವಕೃಪಾಕ್ಕಾದರೂ ಹೋಗಲಿ. ಆಗ ಅವರಿಗೆ ನಿದ್ದೆ ಬರುತ್ತದೆ. ಒಂದು ತಿಂಗಳು ನೀವು ಅಲ್ಲಿ ಕೆಲಸ ಮಾಡಿದರೆ ಬುದ್ದಿ ಬರುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಪ್ರತಿಕ್ರಿಯಸಿದ್ದು, ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ. ಅದರ ವಿರುದ್ಧ ಇಡೀ ದೇಶದಲ್ಲಿ ಟೀಕೆ ಬರುತ್ತಿದೆ. ಕೋಮು ಗಲಭೆ ಹರಡುವ ಸಂದರ್ಭ ಇಂತಹ ಭಾಷಣಗಳಿಂದ ಸೃಷ್ಟಿಯಾಗುತ್ತದೆ. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು.
ಬಿಜೆಪಿ ದೇಶದಾದ್ಯಂತ ಇದರ ವಿರುದ್ಧ ಹೋರಾಟ ಮಾಡುತ್ತದೆ, ದೂರು ದಾಖಲಿಸುತ್ತದೆ. ಇಂದು ಡಿಜಿಪಿಯವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಇಂತಹ ದೇಶದ್ರೋಹಿ ಮಾತಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದು, ರಾಜ್ಯ ಪೊಲೀಸ್ ಇಲಾಖೆ ಕ್ರಮ ಜರುಗಿಸುವ ಬಗ್ಗೆ ನಮಗೆ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಕುರಾನ್ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್ಎಸ್ಎಸ್ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವು, ಅವನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಸಂಬಂಧ ಖರ್ಗೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಖರ್ಗೆ ವಿರುದ್ಧ ಬಿಜೆಪಿ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ.
