ಬೆಂಗಳೂರು : ಜಿಬಿಎ ಚುನಾವಣೆಯಲ್ಲಿ ಹೊಸ ನಾಯಕರು ಸೃಷ್ಟಿ ಆಗ್ತಾರೆ. ಬೆಂಗಳೂರಿನಲ್ಲಿ ಅನೇಕ ಸಮಸ್ಯೆಗಳು ಇವೆ. ಜನರು ಎಚ್ಚೆತ್ತುಕೊಳ್ಳಲು ಇದೊಂದು ಸಮಾವೇಶ. ಬೆಂಗಳೂರಿನಲ್ಲಿ ನಮಗೂ ಶಕ್ತಿ ಇದೆ. ಸಂಘಟನೆ ಒತ್ತು ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಸಮಾವೇಶದ ಪೂರ್ವ ಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶ ಹೊಸ ನಾಯಕತ್ವಕ್ಕೆ ಹೊಸ ಹುರುಪು ತುಂಬಲಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ವಿಶ್ವಾಸವಿದೆ. ದೇವೇಗೌಡರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಜಿಬಿಎ ಚುನಾವಣೆ ಹಿನ್ನೆಲೆ ಪಕ್ಷವನ್ನು ಸಂಘಟಿತಗೊಳಿಸುವ ಕಾರ್ಯ ನಡೆಯುತ್ತಿದೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಬೆಂಗಳೂರಿಗೆ ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು
ರಾಜ್ಯದ ಎಂಟು ಕಡೆ ಸಮಾವೇಶ – ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದ ಎಂಟು ಕಡೆ ಸಮಾವೇಶಗಳನ್ನು ಆಯೋಜಿಸಲಾಗುತ್ತಿದ್ದು, ಅದರ ಆರಂಭ ನಾಳೆ ಬೆಂಗಳೂರಿನಿಂದವಾಗಲಿದೆ. ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರಜತ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಬಿಎ ಚುನಾವಣೆಯಲ್ಲೂ ಹೆಚ್ಚಿನ ಸದಸ್ಯರನ್ನು ಹೊಂದುವ ಗುರಿಯೊಂದಿಗೆ ಪಕ್ಷ ಸಂಘಟನೆ ಬಲಪಡಿಸಲು ಈ ಸಮಾವೇಶಗಳು ನೆರವಾಗಲಿವೆ.ಬೆಂಗಳೂರಿನಲ್ಲಿ ಜೆಡಿಎಸ್ ಶಕ್ತಿ ಕುಂದಿದೆ ಎಂಬ ಟೀಕೆಗಳಿಗೆ ಉತ್ತರವಾಗಿ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆದೇವೇಗೌಡರ ಕೊಡುಗೆ ಅಪಾರ – ಬೆಂಗಳೂರು ಅಭಿವೃದ್ಧಿಗೆ ದೇವೇಗೌಡರ ಕೊಡುಗೆ ಅಪಾರವಾಗಿದ್ದು, ನಗರಕ್ಕೆ ಕಾವೇರಿ ನೀರು ತಂದವರು ದೇವೇಗೌಡರು, ಫ್ಲೈಓವರ್ ಯೋಜನೆಗಳನ್ನು ಜಾರಿಗೆ ತಂದವರೂ ಅವರೇ. ಜಿಬಿಎ ಚುನಾವಣೆಯಲ್ಲಿ ಪ್ರತ್ಯೇಕ ಅಥವಾ ಸ್ವತಂತ್ರ ಸ್ಪರ್ಧೆ ಕುರಿತಂತೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಈ ಕುರಿತು ಚರ್ಚೆ ನಡೆಯಲಿದೆ ಎಂದರು.
ಮೈತ್ರಿ ಬಗ್ಗೆ ಚರ್ಚೆ ಆಗಿಲ್ಲ – ಮೈತ್ರಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಚುನಾವಣೆ ಘೋಷಣೆ ಆದ ಮೇಲೆ ಚರ್ಚೆ ಶುರು ಮಾಡ್ತೀವಿ. ಒಟ್ಟಾಗಿ ಹೋಗಬೇಕಾ? ಏಕಾಂಗಿಯಾಗಿ ಹೋಗಬೇಕಾ? ಅಂತ ಎರಡು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ನಾವು ಪಕ್ಷ ಸಂಘಟನೆ ಮಾಡೋ ಕೆಲಸ ಮಾಡ್ತೀವಿ ಅಂತ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ನಾವು ಒಟ್ಟಾಗಿ ಹೋಗಿದ್ವಿ. ಈಗಲೂ ಬಿಜೆಪಿ ಕೇಂದ್ರ ಮತ್ತು ರಾಜ್ಯದ ನಾಯಕರ ಜೊತೆ ಸೌಹಾರ್ದಯುತವಾಗಿ ಹೊಂದಾಣಿಕೆ ಮಾಡಿಕೊಳ್ತೀವಿ. ಒಟ್ಟಿನಲ್ಲಿ ರಾಜ್ಯದ ಅಭಿವೃದ್ಧಿ ಆಗಬೇಕು. ರಾಜ್ಯಕ್ಕೆ ಒಳ್ಳೆಯದಾಗಬೇಕು ಅನ್ನೋದು ನಮ್ಮ ಉದ್ದೇಶದಿಂದ ಹೊಂದಾಣಿಕೆ ಬಗ್ಗೆ ಮಾತುಕತೆ ಆಗುತ್ತದೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಶರವಣ, ಜವರೇಗೌಡ, ಮಾಜಿ ಶಾಸಕ ವೈಎಸ್‌ವಿ ದತ್ತಾ, ರಮೇಶ್ ಗೌಡ, ತಿಪ್ಪೇಸ್ವಾಮಿ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
