0 Shares

ಬೆಂಗಳೂರು : ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸತ್ತಿರುವ ಘಟನೆ ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.171ರಲ್ಲಿ ವಾರಗಳಷ್ಟೇ ಅಲ್ಲ, ತಿಂಗಳುಗಳಾದರೂ ಕಸ ತೆರವುಗೊಳಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆಗಳ ಬದಿಯಲ್ಲಿ ಕಸದ ರಾಶಿ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆ ಸ್ಥಳೀಯ ನಿವಾಸಿಗಳು ಸ್ವತಃ ಮುಂದಾಗಿ ಜೆಸಿಬಿ ಮತ್ತು ಲಾರಿ ಕರೆಸಿ ಕಸವನ್ನು ತೆರವುಗೊಳಿಸಿದ ಘಟನೆ ನಡೆದಿದೆ. ಸಮಾಜಸೇವಕ ಮಾಸ್ತಿ ಜಾಕಿರ್ ಅಲಿ ತಮ್ಮ ಖರ್ಚಿನಲ್ಲಿ ಈ ಕಾರ್ಯ ಕೈಗೊಂಡು ಜನರಿಗೆ ಸಹಾಯ ಮಾಡಿದ್ದಾರೆ. ನಾವು ವಾಸಿಸುತ್ತಿರುವುದು ಬೆಂಗಳೂರಲ್ಲೋ ಅಥವಾ ಕಸದೂರಲ್ಲೋ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ, ಜಿಬಿಎ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕಸದ ಸಮಸ್ಯೆಯಿಂದ ಉಂಟಾಗಿರುವ ಆರೋಗ್ಯ ಹಾನಿ ಮತ್ತು ಅನಾನುಕೂಲಗಳನ್ನು ವಿವರಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಸವನ್ನು ತೆರವುಗೊಳಿಸಿ, ಇಲ್ಲವಾದರೆ ಶಾಶ್ವತ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂಲಭೂತ ಸಮಸ್ಯೆ ಪರಿಹಾರಕ್ಕಾಗಿ ಜನರೇ ಕಸ ಎತ್ತಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುಃಖಕರವಾಗಿದೆ.

0 Shares

By admin

Leave a Reply

Your email address will not be published. Required fields are marked *