0 Shares

ಬೆಂಗಳೂರು : ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ, ಇಲ್ಲದ ಕಂಪನಿಯೊಂದಕ್ಕೆ ಸುಮಾರು 53 ಎಕರೆ 26 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ‘ಸಂವಿಧಾನಕ್ಕೆ ಮಾಡಿದ ವಂಚನೆ’ ಎಂದು ಕರೆದಿದೆ. ಈ ಬಹುಕೋಟಿ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಆದೇಶಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಏನಿದು ಹಗರಣ? – ಹೆಬ್ಬಾಳದ ಅಮಾನಿಕೆರೆ ಬಳಿಯ ಅತೀ ಹೆಚ್ಚು ಮೌಲ್ಯದ ಜಮೀನನ್ನು 2004ರಲ್ಲಿ ರೈತರಿಂದ ಎಕರೆಗೆ ಕೇವಲ 15 ಲಕ್ಷ ರೂಪಾಯಿಯಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ‘ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್’ ಎಂಬ ಸಂಸ್ಥೆಗೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಸಂಸ್ಥೆಯು ಜಮೀನಿಗಾಗಿ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದೇ 2011ರಲ್ಲಿ! ಅಂದರೆ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಭೂಮಿ ನೀಡಲು ಅಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ನ್ಯಾಯಾಲಯದ ಗಂಭೀರ ಅವಲೋಕನ – ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠವು ಈ ಪ್ರಕರಣದಲ್ಲಿ ಸರ್ಕಾರದ ಒಳಸಂಚನ್ನು ಬಯಲಿಗೆಳೆದಿದೆ. ನ್ಯಾಯಾಲವು ಉಲ್ಲೇಖಿಸಿರುವ ಅಂಶಗಳು ಹೀಗಿವೆ; ಅರ್ಜಿ ಸಲ್ಲಿಸಿದ 5 ದಿನದಲ್ಲೇ ಅನುಮೋದನೆ: ಸಂಸ್ಥೆ ಅರ್ಜಿ ಸಲ್ಲಿಸಿದ ಐದೇ ದಿನಗಳಲ್ಲಿ ಸಭೆ ನಡೆಸಿ ಭೂಸ್ವಾಧೀನಕ್ಕೆ ಶಿಫಾರಸು ಮಾಡಲಾಗಿತ್ತು.

ಕಡಿಮೆ ಬಂಡವಾಳ : ಕೇವಲ 1 ಲಕ್ಷ ರೂಪಾಯಿ ಷೇರ್ ಕ್ಯಾಪಿಟಲ್ ಹೊಂದಿರುವ, ಪ್ರಸ್ತುತ ಮೌಲ್ಯ ಮೈನಸ್ 8.60 ಲಕ್ಷ ರೂಪಾಯಿ ಇರುವ ಸಂಸ್ಥೆಗೆ ಸಾವಿರಾರು ಕೋಟಿ ಮೌಲ್ಯದ ಭೂಮಿ ನೀಡಲಾಗಿದೆ.
ಉದ್ದೇಶ ಬದಲಾವಣೆ : ಪ್ರವಾಸೋದ್ಯಮ ಕೇಂದ್ರದ ಹೆಸರಲ್ಲಿ ಭೂಮಿ ಪಡೆದು, ನಂತರ ಅದನ್ನು ಕಮರ್ಷಿಯಲ್ ಟೌನ್‌ಶಿಪ್‌ಗಾಗಿ ಬಳಸಲು 2023ರಲ್ಲಿ ಸರ್ಕಾರ ನಿರ್ಧರಿಸಿತ್ತು.

‘ಈ ಭೂಸ್ವಾಧೀನ ಪ್ರಕ್ರಿಯೆಯೇ ಸಾರ್ವಜನಿಕ ಉದ್ದೇಶದ್ದಾಗಿರಲಿಲ್ಲ. ಸರ್ಕಾರದ ಅಧಿಕಾರಿಗಳೇ ಖಾಸಗಿಯವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲದ ಕಾರಣ ಸಿಬಿಐಗೆ ವಹಿಸಲಾಗುತ್ತಿದೆ’ ಎಂದು ಹೈಕೋರ್ಟ್ ಆದೇಶಿಸಿದೆ.

0 Shares

By admin

Leave a Reply

Your email address will not be published. Required fields are marked *