0 Shares

ಬೆಂಗಳೂರು : ವಿಜಯನಗರದಲ್ಲಿರುವ ‘ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ ಕಚೇರಿಯಲ್ಲಿ ನಡೆದ ಘಟನೆಯೊಂದು ಈಗ ಪೊಲೀಸ್ ಮೆಟ್ಟಿಲೇರಿದೆ. ವಾಸ್ತು ಕೇಳಲು ಹೋದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಇದು ಹಣಕ್ಕಾಗಿ ನಡೆಸಿದ ಬ್ಲ್ಯಾಕ್‌ಮೇಲ್ ತಂತ್ರ ಎಂದು ಆರೋಪಿಗಳು ಮರುದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆಯು ಏಪ್ರಿಲ್ 4ರಂದು ತನ್ನ ಮನೆಯ ವಾಸ್ತು ಕೇಳಲು ಶಾಂತಕುಮಾರ್ ಎಂಬುವವರ ಕಚೇರಿಗೆ ತೆರಳಿದ್ದರು. ಈ ವೇಳೆ ಶಾಂತಕುಮಾರ್ ಅವರು ವಾಸ್ತು ಹೇಳುವ ನೆಪದಲ್ಲಿ ತನ್ನ ಎದೆಯ ಭಾಗ ಹಾಗೂ ಹೊಟ್ಟೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿದ್ದ ಭರತ್, ಶಾಂತಕುಮಾರ್ ಪತ್ನಿ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಾಸ್ತು ಸಲಹೆಗಾಗಿ 15 ಸಾವಿರ ರೂಪಾಯಿ ನಗದು ಪಡೆದೂ ದೌರ್ಜನ್ಯ ಎಸಗಿದ್ದಾರೆ ಎಂಬುದು ಇವರ ಆರೋಪವಾಗಿದೆ. ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಶಾಂತರಾಜು, ಇದೊಂದು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ದಂಧೆ ಎಂದು ದೂರಿದ್ದಾರೆ. ಸುನೀಲತಾ ಎಂಬ ಮಹಿಳೆ ತನ್ನನ್ನು ಮೀಡಿಯಾ ಮತ್ತು ಪೊಲೀಸ್ ಎಂದು ಪರಿಚಯಿಸಿಕೊಂಡು, ಜಮಾಲ್ ಮತ್ತು ಅಮೃತಲಿಂಗಂ ಎಂಬುವವರ ಜೊತೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಅಲ್ಲದೆ, ಶಾಂತರಾಜು ಅವರ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋವಿಂದರಾಜನಗರ ಪೊಲೀಸರು ಎರಡೂ ಕಡೆಯ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಒಂದು ಕಡೆ ಲೈಂಗಿಕ ದೌರ್ಜನ್ಯದ ಆರೋಪವಿದ್ದರೆ, ಮತ್ತೊಂದು ಕಡೆ ಸುಲಿಗೆ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳಿವೆ.

0 Shares

By admin

Leave a Reply

Your email address will not be published. Required fields are marked *