ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೆರೆಗಳ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಲೋವರ್ ಅಂಬಲಿಪುರ ಕೆರೆಗೆ ದೊಡ್ಡ ಕಂಟಕ ಎದುರಾಗಿದೆ. ಕೆರೆಗೆ ಹೊಂದಿಕೊಂಡೇ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಸಮುಚ್ಚಯವೊಂದು ಪೈಪ್‌ಗಳ ಮೂಲಕ ನೇರವಾಗಿ ಕೊಳಚೆ ನೀರನ್ನು ಕೆರೆಯ ಒಡಲಿಗೆ ಹರಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಇಬ್ಬಲೂರು ಬಳಿಯ ಅಂಬಲಿಪುರ ಕೆರೆಗೆ ಪಕ್ಕದಲ್ಲೇ ಇರುವ ‘ಟ್ರಿನಿಟಿ ಏಕರ್ಸ್ ಅಂಡ್ ವುಡ್’ ಅಪಾರ್ಟ್‌ಮೆಂಟ್‌ನಿಂದ ಕಲುಷಿತ ನೀರು ಹರಿಯುತ್ತಿದೆ. ಸುಮಾರು 300 ಕುಟುಂಬಗಳು ವಾಸವಾಗಿರುವ ಈ ಸಮುಚ್ಚಯದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಶುದ್ಧೀಕರಿಸದೆ (STP ಬಳಸದೆ), ಎರಡು ಪೈಪ್‌ಗಳ ಮೂಲಕ ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಇದು ಕೆರೆಯ ಜೀವವೈವಿಧ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ವಿಶೇಷವೆಂದರೆ, ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಕೆಲವು ಮಂದಿ ನಿವಾಸಿಗಳೇ ಅಸೋಸಿಯೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಲವು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಕೆರೆಯನ್ನು ಪುನರುಜ್ಜೀವನಗೊಳಿಸಲಾಗಿತ್ತು. ಆದರೆ ಈಗ ಕಲುಷಿತ ನೀರು ಸೇರುತ್ತಿರುವುದರಿಂದ ಕೆರೆ ಮತ್ತೆ ಹಾಳಾಗುತ್ತಿದೆ. ಈ ಬಗ್ಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಅಕ್ಷತಾ ದೂರಿದ್ದಾರೆ.
ಪ್ರಸ್ತುತ ಅಂಬಲಿಪುರ ಕೆರೆಗೆ ಈ ಅಪಾರ್ಟ್‌ಮೆಂಟ್‌ನ ಪೈಪ್‌ಗಳ ಹೊರತಾಗಿ ಬೇರೆ ಯಾವುದೇ ಕಲುಷಿತ ನೀರಿನ ಸಂಪರ್ಕವಿಲ್ಲ. ಕೆರೆಗೆ ಪೈಪ್ ಸಂಪರ್ಕ ಕಲ್ಪಿಸಿರುವುದೇ ಕಾನೂನುಬಾಹಿರವಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೆರೆಗೆ ವಿಷಕಾರಕ ನೀರು ಹರಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
