0 Shares

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಅನಾಥ, ಬಡ ಮತ್ತು ನಿರಾಶ್ರಿತ ಮಕ್ಕಳ ಅನ್ನಕ್ಕೂ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರವಾಗಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 18 ವರ್ಷದೊಳಗಿನ ಪಾಲಕರಿಲ್ಲದ 26,334 ಮಕ್ಕಳು ಇದ್ದರೂ, ಅವರಿಗೆ ನೀಡಬೇಕಾದ ತಿಂಗಳಿಗೆ 4 ಸಾವಿರ ರೂ. ಮಾಸಾಶನವನ್ನು 7 ತಿಂಗಳಿನಿಂದ ನೀಡಿಲ್ಲ ಎಂದು ಹೇಳಿದರು. 75 ಕೋಟಿ ರೂ. ಅನುದಾನ ಇದ್ದರೂ ಮಕ್ಕಳಿಗೆ ಹಣ ನೀಡಿಲ್ಲ. ಅನಾಥ ಮಕ್ಕಳಿಗಾಗಿ ಮೀಸಲಿಟ್ಟ ಹಣ ಯಾರ ಜೇಬಿಗೆ ಹೋಗಿದೆ?” ಎಂದು ಪ್ರಶ್ನಿಸಿದರು.

“ಒಂದು ಕಡೆ ಸರ್ಕಾರ ಫಾರಿನ್ ಟೂರ್‌ನಲ್ಲಿ ಮೋಜು-ಮಸ್ತಿ ಮಾಡುತ್ತಿದೆ. ಇನ್ನೊಂದು ಕಡೆ ಬಡ ಮಕ್ಕಳು ಉಪವಾಸ ಸಾಯುವ ಪರಿಸ್ಥಿತಿ ಬಂದಿದೆ. ಅಲ್ಲಿ ಅನ್ನಭಾಗ್ಯ ಇದೆ, ಇಲ್ಲಿ ಮಕ್ಕಳಿಗೆ ಮಾಸಾಶನ ಇಲ್ಲ. ಬೀದಿ ಬಿಕಾರಿಗಳ ಹಣವನ್ನು ನುಂಗಿದ ಸರ್ಕಾರ ಇದು” ಎಂದು ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮಿ ಸೇರಿದಂತೆ ಹಲವು ಜನಹಿತ ಯೋಜನೆಗಳ ಅನುದಾನವೂ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದ ಅಶೋಕ್, “ಸರ್ಕಾರ ಪಾಪರ್ ಆಗಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಡ. ಅನುದಾನ ಕೊಡೋ ಯೋಗ್ಯತೆಯೇ ಇಲ್ಲ, ಬಜೆಟ್ ಸಂಪೂರ್ಣ ಕೇಡಾಗಿದೆ” ಎಂದರು. ಹಿಂದುಳಿದ ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅವರಿಗೆ ಮಾಸಾಶನ ನೀಡದೆ ದ್ರೋಹ ಮಾಡಲಾಗಿದೆ ಎಂದು ಹೇಳಿದರು.

ಸಾರಿಗೆ ನಿಗಮ ಬಂದ್ ವಿಚಾರ – ನಾಲ್ಕೂ ಸಾರಿಗೆ ನಿಗಮಗಳನ್ನು ಬಂದ್ ಮಾಡಿ ನಾಳೆ ನೌಕರರು ಮುಷ್ಕರಕ್ಕೆ ಇಳಿಯುತ್ತಿದ್ದಾರೆ ಎಂದು ತಿಳಿಸಿದ ಅವರು, “38 ತಿಂಗಳ ಅರಿಯರ್ಸ್ ಇನ್ನೂ ನೀಡಿಲ್ಲ. ಇದು ಸರ್ಕಾರ ದಿವಾಳಿ ಆಗಿದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಲಾಭದಲ್ಲಿದ್ದವು” ಎಂದು ಹೇಳಿದರು.

“ಇಂದು ಜೆಸಿಬಿ, ಟಿಪ್ಪರ್‌ಗಳಲ್ಲಿ ಶಾಲಾ ಮಕ್ಕಳು ಟೂರ್ ಹೋಗುವ ಸ್ಥಿತಿ ಬಂದಿದೆ. ಹಣ ಇಲ್ಲ ಅಂದರೆ ಪಾಪರ್ ಸಿಎಂ ಎಂದು ಶ್ವೇತಪತ್ರ ಹೊರಡಿಸಲಿ. ಸಾರಿಗೆ ನೌಕರರು ಪ್ರತಿಭಟನೆಗೆ ಹೋದಾಗ ಎಸ್ಮಾ ಜಾರಿ ಮಾಡಿರುವುದು ದೌರ್ಜನ್ಯ” ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸ್ಥಗಿತ – ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕಸ ತೆಗೆಯಲಾಗುತ್ತಿಲ್ಲ ಎಂದು ಆರೋಪಿಸಿದ ಅಶೋಕ್, “ಲಾರಿಗೆ ತುಂಬಿದ ಕಸವೂ ಡಂಪ್ ಆಗುತ್ತಿಲ್ಲ. ಬಹುಶಃ ಕಾರ್ಮಿಕರಿಗೆ ಸಂಬಳ ನೀಡಿಲ್ಲ. ಮಾನ ಮರ್ಯಾದೆ ಇದ್ದರೆ ಕಸ ತೆಗೆಯಲಿ, ಸಾರಿಗೆ ನೌಕರರಿಗೆ ಅರಿಯರ್ಸ್ ನೀಡಿ” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಗುತ್ತಿಗೆದಾರರು, ಅಬಕಾರಿ ಹಗರಣ – ಗುತ್ತಿಗೆದಾರರ ಸಂಘವೂ ಕೆಲಸ ನಿಲ್ಲಿಸಲು ಸಿದ್ಧವಾಗಿದೆ ಎಂದು ಹೇಳಿದ ಅವರು, “ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣ ನಡೆಯುತ್ತಿದೆ. ದೊಡ್ಡ ಹೆಗ್ಗಣಗಳು ಅಲ್ಲಿ ಇವೆ. ಸರ್ಕಾರ ಕೇವಲ ಕುರ್ಚಿ ಕಿತ್ತಾಟದಲ್ಲೇ ಮುಳುಗಿದೆ” ಎಂದು ಆರೋಪಿಸಿದರು. “ಟೆಂಡರ್‌ಗೆ 7%, ಬಿಲ್ ಕೊಡೋಕೆ 7%, ಸ್ಪೆಷಲ್ NOCಗೆ 7% – ಒಟ್ಟು 21% ಕೊಟ್ಟರೆ ಮಾತ್ರ ಕೆಲಸ ನಡೆಯುತ್ತದೆ. ಇದಲ್ಲದೆ ಬಿಟ್ಟಿ ಇಂಜಿನಿಯರ್‌ಗಳಿಗೆ ಬೇರೆ” ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಒಳಜಗಳ ಕುರಿತು ವ್ಯಂಗ್ಯ – ಸಿಎಂ–ಡಿಸಿಎಂ ನಡುವೆ ಜಗಳ ನಡೆಯುತ್ತಿದ್ದು, ಅದು ಈಗ ‘ಬೀದಿ ನಾಯಿಗಳ ಜಗಳ’ದಂತೆ ಆಗಿದೆ ಎಂದು ವ್ಯಂಗ್ಯವಾಡಿದ ಅಶೋಕ್, “ನಾಯಿ, ನಿಯತ್ತಿನ ನಾಯಿ ಅಂತಾರೆ. ಸದ್ಯ ಹುಚ್ಚು ನಾಯಿ ಅಂತ ಹೇಳಿಲ್ಲ ಅಷ್ಟೇ. ಮುಖ್ಯಮಂತ್ರಿ ಕುರ್ಚಿಗೆ ಇದ್ದ ಗೌರವ ಇಂದು ನಗೆಪಾಟಲಿಗೆ ಒಳಗಾಗಿದೆ” ಎಂದು ಕಿಡಿಕಾರಿದರು.

ಮಾಧ್ಯಮ ನಿರ್ಬಂಧ ವಿಚಾರ – ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ನಿರ್ಧಾರ ಸರಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಸರ್ಕಾರದ ಹುಳುಕುಗಳನ್ನು ಮಾಧ್ಯಮಗಳು ತೋರಿಸುತ್ತಿವೆ ಎಂಬ ಕಾರಣಕ್ಕೆ ಮೀಡಿಯಾ ಬ್ಯಾನ್ ಮಾಡಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಈ ಆದೇಶ ವಾಪಸ್ ಪಡೆಯಲು ಹೇಳುತ್ತೇನೆ” ಎಂದು ತಿಳಿಸಿದರು.

0 Shares

By admin

Leave a Reply

Your email address will not be published. Required fields are marked *