ಬೆಂಗಳೂರು : ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಕರುಣೆ ಇಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಗೌರವದಿಂದ ವರ್ತಿಸದಿದ್ದರೆ ಎಸ್ಮಾ ಕಾಯ್ದೆ ಅಡಿ ಕ್ರಮ ಅನಿವಾರ್ಯ ಎಂದು ಅವರು ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಚೇರಿ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಗೌರವದಿಂದ ಇದ್ದರೆ ಸರಿ. ಇಲ್ಲದಿದ್ದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ ನಿಷ್ಕರುಣೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಗತ್ಯವಿದ್ದರೆ ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಕಸವನ್ನು ತೆಗೆದುಕೊಂಡು ಹೋಗಿ ಹಾಕಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕೆಲವು ಶಾಸಕರು ಕಸ ಹಾಕಬಾರದು, ನಮಗೆ ಅನುದಾನ ಬೇಕು ಎಂದು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಮಂಗಳವಾರ ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರದ ಶಾಸಕರು ಹೀಗೆ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರು ಯಾರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ?” ಎಂದು ಕಿಡಿಕಾರಿದರು.
ಶಾಸಕರುಗಳು ಯಾವ ಉದ್ದೇಶಕ್ಕೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಹಿಂದಿನಿಂದ ಹೇಗೆ ಕೆಲಸ ನಡೆಯುತ್ತಿತ್ತೋ ಅದೇ ರೀತಿ ಈಗಲೂ ಕೆಲಸ ನಡೆಯುತ್ತಿದೆ. ತಮ್ಮ ಕ್ಷೇತ್ರಗಳಿಗೆ ಅನುದಾನ ಬೇಕು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕಸದ ಲಾರಿಯಿಂದ ಅಪಘಾತ ಸಂಭವಿಸಿರುವ ಕಾರಣಕ್ಕೆ ಕಸ ವಿಲೇವಾರಿ ತಡೆಯಲಾಗುತ್ತಿದೆ ಎಂಬ ಆರೋಪದ ಕುರಿತು ಮಾತನಾಡಿದ ಡಿಸಿಎಂ, “ಅಪಘಾತವಾಗಬಾರದಿತ್ತು, ಆದರೆ ಆಗಿದೆ. ಅದಕ್ಕೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸುವುದು ಸರಿಯಲ್ಲ. ಎಸ್.ಟಿ.ಸೋಮಶೇಖರ್, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ನಡೆಯುತ್ತಿದೆ” ಎಂದು ತಿಳಿಸಿದರು.
ಇದಲ್ಲದೆ, “ಹೊಸವಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್ ಕರೆಯಲಾಗಿದೆ. ಕೆಲವು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಅನುದಾನ ಅಲಭ್ಯತೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ – ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಹೆಚ್ಚಿದೆ ಎಂಬ ಗುತ್ತಿಗೆದಾರರ ಸಂಘದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, “ಇದರ ಬಗ್ಗೆ ದೂರು ನೀಡಲು ಅವರಿಗೆ ತಿಳಿಸಿ. ಮೊದಲು ಕೆಲಸ ನಿಲ್ಲಿಸಲಿ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೆ ಕೆಲಸ ತೆಗೆದುಕೊಳ್ಳಬೇಡಿ ಎಂದು ಹೇಳಿರಲಿಲ್ಲವೇ? ಆದರೂ ಏಕೆ ಕೆಲಸಗಳನ್ನು ತೆಗೆದುಕೊಂಡರು? ಹಣ ಲಭ್ಯವಿಲ್ಲದಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕೆಲಸಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಆರೋಪಿಸಿದರು.
“ಬೆಂಗಳೂರು ನಗರದಲ್ಲಿ ಎಷ್ಟು ಹೊಂದಿಸಬೇಕೋ ಅಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಉದಾಹರಣೆಗೆ 10 ಸಾವಿರ ಕೋಟಿ ಅನುದಾನ ಇದ್ದರೆ 30-40 ಸಾವಿರ ಕೋಟಿ ಟೆಂಡರ್ಗಳನ್ನು ಕರೆಯಲಾಗಿದೆ. ಇದಕ್ಕೆಲ್ಲಾ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಈಗ ಬಿಲ್ ಬಿಲ್ ಎಂದರೆ ಏನು ಮಾಡುವುದು? ಅಂದು ಏಕೆ ಕೆಲಸಗಳನ್ನು ತೆಗೆದುಕೊಂಡರು? ನನ್ನ ಇಲಾಖೆಯ ದಾಖಲೆಗಳನ್ನು ನೀಡುತ್ತೇನೆ” ಎಂದು ಡಿಸಿಎಂ ಹೇಳಿದರು.
ನಿಮಗೂ ಕೆಲಸ ನಿಲ್ಲಿಸುತ್ತೇವೆ ಎಂದು ಬ್ಲಾಕ್ಮೇಲ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕೆಲಸ ನಿಲ್ಲಿಸುವವರು ನಿಲ್ಲಿಸಿಕೊಳ್ಳಲಿ. ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಬಜೆಟ್ ಪ್ರಕಾರವೇ ಹಣ ನೀಡುತ್ತಿದೆ. ಎಷ್ಟು ಆಗುತ್ತದೆಯೋ ಅಷ್ಟು ಹಣವನ್ನು ಕೊಡುತ್ತೇವೆ. ಬಜೆಟ್ ಆದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಮಗೂ ಮಾನವೀಯತೆ ಇದೆ. ಆದರೆ ಬ್ಲಾಕ್ಮೇಲ್ಗೆ ನಾವು ಬಗ್ಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ನಕಲಿ ಬೆರಳಚ್ಚಿನ ಮೂಲಕ ಅನ್ನಭಾಗ್ಯ ಅಕ್ಕಿ ಲೂಟಿ ಪ್ರಕರಣದ ಬಗ್ಗೆ ಕೇಳಿದಾಗ, “ಈ ಕುರಿತು ನನಗೆ ಮಾಹಿತಿ ಇಲ್ಲ” ಎಂದು ಉತ್ತರಿಸಿದರು.
