0 Shares

ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. 150ನೇ ವರ್ಷಾಚರಣೆ ಹಿನ್ನೆಲೆ 150 ಕಾರ್ಯಕರ್ತರಿಂದ ವಂದೇ ಮಾತರಂ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲೇ ಬಿಜೆಪಿ ಕಾರ್ಯಕರ್ತರು ವಂದೇ ಮಾತರಂ ಗೀತೆಯ ಸಂಪೂರ್ಣ ಆರು ಪ್ಯಾರಾಗಳನ್ನು ಹಾಡಿದರು. ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ವಂದೇ ಮಾತರಂ ಗಾಯನ ಪಠಣಕ್ಕೆ ವಿಶೇಷ ಮಹತ್ವ ನೀಡಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಷಣ – ಭಾಷಣದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವಗುರು ಆಗುವತ್ತ ದೃಢ ಹೆಜ್ಜೆ ಇಟ್ಟಿದೆ ಎಂದು ಹೇಳಿದರು. ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಮೋದಿ ನಾಯಕತ್ವವೇ ಕಾರಣ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಿದ್ದು, ದೇಶದ ಭದ್ರತೆ ಮತ್ತು ಸುರಕ್ಷತೆಗೆ ಶಕ್ತಿ ತುಂಬುವ ಬಜೆಟ್ ಆಗಿದೆ ಎಂದು ಪ್ರಶಂಸಿಸಿದರು. ಅಮೆರಿಕವೂ ಕೂಡ ಭಾರತದೊಂದಿಗೆ ಸಂಬಂಧ ಮುಂದುವರೆಸಲು ಉತ್ಸುಕವಾಗಿದ್ದು, ಅದಕ್ಕೆ ಉದಾಹರಣೆಯಾಗಿ 50 ಶೇಕಡಾ ಟಾರಿಫ್ ಇಳಿಕೆಯನ್ನೂ ಉಲ್ಲೇಖಿಸಿದರು. ಬಿಹಾರದಲ್ಲಿ SIR ಪರಿಣಾಮವಾಗಿ NDA ಅಧಿಕಾರಕ್ಕೆ ಬಂದಿದೆ. ಇದೇ ಮಾದರಿ ಕರ್ನಾಟಕದಲ್ಲೂ ಬರಲಿದ್ದು, ಕಾರ್ಯಕರ್ತರು ಹೆಚ್ಚು ಜಾಗೃತರಾಗಿರಬೇಕು ಎಂದು ಕರೆ ನೀಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ – ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಿವಿಧ ಜಿಲ್ಲೆಗಳಲ್ಲಿ ಹಿಂದೂ ಕಾರ್ಯಕರ್ತರು, ದಲಿತರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲಿನ ಹತ್ಯೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಎರಡು ಲಕ್ಷ 85 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇದ್ದರೂ ನೇಮಕಾತಿ ನಡೆಯುತ್ತಿಲ್ಲ. ಜನ ವಿರೋಧಿ, ಬಡವರ ವಿರೋಧಿ ಮತ್ತು ಮಹಿಳೆಯರ ವಿರೋಧಿ ಆಡಳಿತ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು. ಮುಡಾ ಹಗರಣ, ವಾಲ್ಮೀಕಿ ಹಗರಣಗಳಲ್ಲಿ ಬಿಜೆಪಿ ಹೋರಾಟಕ್ಕೆ ಜಯ ಸಿಕ್ಕಿದ್ದು, ಇದರಿಂದ ಸಚಿವ ನಾಗೇಂದ್ರ ರಾಜೀನಾಮೆ ಹಾಗೂ ಸಿಎಂ 14 ನಿವೇಶನ ವಾಪಸ್ ನೀಡುವಂತಾಗಿದೆ ಎಂದು ಹೇಳಿದರು.

ಮುಂದಿನ ಚುನಾವಣೆಗಳಿಗೆ ಸಿದ್ಧತೆ – ಮುಂದಿನ ತಿಂಗಳಲ್ಲಿ ಗ್ರಾಮ ಪಂಚಾಯತ್, ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳು, ಉಪ ಚುನಾವಣೆಗಳು ಹಾಗೂ ವಿಧಾನ ಪರಿಷತ್ ಚುನಾವಣೆಗಳು ನಡೆಯಲಿವೆ. ಈ ಎಲ್ಲ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗತವೈಭವ ಮರಳಿ ತರಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ಎಲ್ಲಾ ಹಿರಿಯರ ವಿಶ್ವಾಸ ಪಡೆದು ಪಕ್ಷವನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ವಿಜಯೇಂದ್ರ ಕರೆ ನೀಡಿದರು.

0 Shares

By admin

Leave a Reply

Your email address will not be published. Required fields are marked *