ಬೆಂಗಳೂರು : ಈ ದೇಶದ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಬದುಕು ಕಟ್ಟಿಕೊಡುವ ಕೆಲಸವನ್ನು ಮೋದಿಜೀ ಅವರು ಮಾಡುತ್ತಿದ್ದರೆ ನಮ್ಮ ರಾಜ್ಯದಲ್ಲಿ ಒಬ್ಬ ಅನುಭವಿ ಮುಖ್ಯಮಂತ್ರಿಗಳು, 16 ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರ ಯೋಜನೆಗಳು ಹೇಗಿವೆ ಎಂದರೆ, ರಾಜ್ಯದ ಜನರಿಗೆ ಕಾಯುವುದೇ ಕೈಲಾಸ ಎಂಬಂತೆ ಸತಾಯಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 1000 ದಿನ ಪೂರೈಸಿ ಹಾವೇರಿಯಲ್ಲಿ ಬೃಹತ್ ಸಮಾವೇಶ, ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಒಂದು ಕಡೆ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಕಾಯಕವೇ ಕೈಲಾಸ ಎಂದು ಭಾವಿಸಿ, ದೇಶವನ್ನು ಸರಿದಾರಿಯಲ್ಲಿ ಒಯ್ಯುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.

ಮಹಾತ್ಮ ಗಾಂಧೀಜಿ ಅವರ ಬಗ್ಗೆ ಸಾಕಷ್ಟು ಗೌರವವನ್ನು ಕಾಂಗ್ರೆಸ್ಸಿನವರು ಇಟ್ಟುಕೊಂಡಿದ್ದಾರೆ. ಇನ್ನೊಂದೆಡೆ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹಾಗೂ ಕುಡುಕರನ್ನು ಸೃಷ್ಟಿ ಮಾಡಲು ಹೊರಟ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಸಾವಿರ ಸುಳ್ಳು ಹೇಳಿ ರಾಜ್ಯದ ಜನರಿಗೆ, ನಾಡಿನ ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಅನ್ಯಾಯ – ಕಾಂಗ್ರೆಸ್ ಸರಕಾರವು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗದು ಎಂಬಂತೆ ಕೇಂದ್ರ ಸರಕಾರಕ್ಕೆ ದ್ರೋಹ ಬಗೆಯುತ್ತಿದೆ ಎಂದು ಟೀಕಿಸಿದರು. ಇದರ ದಾಖಲಾತಿಗಳನ್ನೂ ಅವರು ಬಿಡುಗಡೆ ಮಾಡಿದರು.
ನೂರು ಸುಳ್ಳು ಹೇಳಿ ಮದುವೆ ಮಾಡಿ ಎಂಬ ಗಾದೆಯನ್ನು ಪ್ರಸ್ತಾಪಿಸಿದ ಅವರು, 1000 ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿ ಮುಳುಗಿದ ಮುಖ್ಯಮಂತ್ರಿಗಳು, ಸಚಿವರು ಸಾವಿರ ಸುಳ್ಳು ಹೇಳಿ ರಾಜ್ಯದ ಜನರಿಗೆ, ನಾಡಿನ ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಅನ್ಯಾಯವೆಸಗಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ನಡೆಸುವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗಷ್ಟೇ ನ್ಯಾಯ ಕೊಟ್ಟು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ, ಒಕ್ಕಲಿಗರು, ವೀರಶೈವ ಲಿಂಗಾಯತ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಜನತೆ ಚರ್ಚಿಸುತ್ತಿದ್ದಾರೆ ಎಂದು ವಿವರಿಸಿದರು.
