0 Shares

ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಗಾಯಗೊಂಡಿದ್ದ, ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಅಮಲಾ (49) ಮೃತ ದುರ್ದೈವಿಯಾಗಿದ್ದು, ಆಡುಗೋಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಭಾನುವಾರ) ಅಪಘಾತ ನಡೆದಿತ್ತು.

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಅಮಲಾ ರಸ್ತೆಗೆ ಬಿದ್ದಿದ್ದರು. ಈ ವೇಳೆ ಅವರ ದೇಹದ ಮೇಲೆ ಟಿಪ್ಪರ್​​ ಹರಿದ ಕಾರಣ ಅವರ ಎರಡೂ ಕಾಲುಗಳು ಛಿದ್ರಗೊಂಡಿದ್ದವು. ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಪಘಾತದ ಕಾರಣದ ಬಗ್ಗೆಯೂ ಚರ್ಚೆ ಶುರುವಾಗಿದೆ. ರಸ್ತೆ ಗುಂಡಿಯಿಂದಲೇ ಅವಾಂತರ ಎಂದು‌ ಸ್ಥಳೀಯರು ಆರೋಪಿಸುತ್ತಿದ್ದರೆ, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಟಿಪ್ಪರ್ ಚಾಲಕನ ವಿರುದ್ಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಪಘಾತದ ಬಗ್ಗೆ ಮೃತ ಅಮಲಾರ ಸಹೋದರ ಪ್ರತಿಕ್ರಿಯೆ ನೀಡಿದ್ದು, ಚರ್ಚ್​​ಗೆ ಹೋಗಿ ದ್ವಿಚಕ್ರ ವಾಹನದಲ್ಲಿ ಆಕೆ ಮಗನ ಜೊತೆ ಹಿಂತಿರುಗುತ್ತಿದ್ದಾಗ ಆಡುಗೋಡಿಯ ಬಾಷ್ ಕಂಪನಿ ಮುಂದೆ ಅಪಘಾತ ನಡೆದಿದೆ. ಎದುರಿಗೆ ಆಟೋ ಬಂದ ಹಿನ್ನೆಲೆ ಅಮಲಾ ಬ್ರೇಕ್​​ ಹಾಕಿದ್ದು, ಈ ವೇಲೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್​​ ಇವರ ದ್ವಿಚಕ್ರ ವಾಹನದ ಮೇಲೆ ಹರಿದಿದೆ.

ಬೆಳಿಗ್ಗೆ 11 ಗಂಟೆ ವೇಳೆಗೆ ನಡೆದ ಈ ಅಪಘಾತದಲ್ಲಿ ಅಮಲಾ ಗಂಭೀರ ಗಾಯಗೊಂಡಿದ್ದರೆ, ಆಕೆಯ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಟಿಪ್ಪರ್​​ ಚಾಲಕ ಪರಾರಿಯಾಗಿದ್ದು, ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *