ಮೈಸೂರು : ಬಂಡಿ ಉತ್ಸವದ ವೇಳೆ ಬಂಡಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ತಲಕಾಡು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಪ್ರವೀಣ್ (22) ಎಂದು ಗುರುತಿಸಲಾಗಿದೆ. ತಲಕಾಡು ಗ್ರಾಮದೇವತೆ ಬಂಡರಸಮ್ಮ ಹಬ್ಬದ ಅಂಗವಾಗಿ ಆಯೋಜಿಸಿದ್ದ ಬಂಡಿ ಉತ್ಸವದಲ್ಲಿ ಪ್ರವೀಣ್ ಬಂಡಿ ಓಡಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ನೆನ್ನೆ ಬಂಡಿ ಓಡುವ ಸಂದರ್ಭದಲ್ಲಿ ಬಂಡಿಯಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆ ತಲಕಾಡು ಗ್ರಾಮದಲ್ಲಿ ಶೋಕದ ವಾತಾವರಣವನ್ನುಂಟುಮಾಡಿದ್ದು, ಹಬ್ಬದ ಸಂಭ್ರಮ ಕ್ಷಣಾರ್ಧದಲ್ಲೇ ದುಃಖಕ್ಕೆ ತಿರುಗಿದೆ. ಸ್ಥಳೀಯರು ಹಾಗೂ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
