0 Shares

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ವಿಜಯೋತ್ಸವ ಮತ್ತು ಗೌರಸಮರ್ಪಣೆಯ ಅಂಗ ವಾಗಿ ಭೂಮಿಹಬ್ಬ ಆಚರಣೆ ನಡೆಯಲಿದೆ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಚನ್ನರಾಯಪಟ್ಟಣ ರೈತರ ಐತಿಹಾಸಿಕ ವಿಜಯದ ಸಂಭ್ರಮಾಚರಣೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಫೆಬ್ರವರಿ 27 ರಂದು ‘ಭೂಮಿ ಹಬ್ಬ’ ಆಚರಣೆ ಸಂಬಂಧ ಕರೆಯಲಾದ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ, ದೇವನಹಳ್ಳಿಯ ತಾಲೂಕಿನ ವಿವಿಧ 13 ಹಳ್ಳಿಗಳ ರೈತರು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಸುದೀರ್ಘ ನಾಲ್ಕು ವರ್ಷಗಳ ಸತ್ಯಾಗ್ರಹಕ್ಕೆ ಐತಿಹಾಸಿಕ ಜಯ ಲಭಿಸಿದೆ.

ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಮಣ್ಣಿನ ಮೇಲೆ ಕಣ್ಣಿಟ್ಟಿದ್ದ ಭೂದಾಹದ ವ್ಯವಸ್ಥೆಯ ವಿರುದ್ಧ ರೈತರು ತೋರಿದ ಅಪ್ರತಿಮ ಸಂಘಟಿತ ಶಕ್ತಿಗೆ ಸರ್ಕಾರ ಕೊನೆಗೂ ಮಣಿದಿದೆ. ದೀರ್ಘ ಕಾಲ ಮಳೆ, ಗಾಳಿ, ಬಿಸಿಲೆನ್ನದೆ ಧರಣಿ ಕುಳಿತ ರೈತರ ಛಲಕ್ಕೆ ಸಂದ ಜಯವಾಗಿ, ಸುಮಾರು 1777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

ಈ ವಿಜಯವು ಕೇವಲ ಚನ್ನರಾಯಪಟ್ಟಣದ ರೈತರದ್ದಲ್ಲ, ಬದಲಿಗೆ ಭೂಮಿಯೇ ಜೀವನಾಧಾರವೆಂದು ನಂಬಿರುವ ನಾಡಿನ ಸಮಸ್ತ ರೈತಕುಲದ ಸ್ವಾಭಿಮಾನದ ಸಂಕೇತವಾಗಿದೆ. ಈ ಸುದೀರ್ಘ ಹೋರಾಟದ ಹಾದಿಯಲ್ಲಿ ನಮಗೆ ಧೈರ್ಯ ತುಂಬಿ, ಹೆಗಲಿಗೆ ಹೆಗಲು ಕೊಟ್ಟು ನಿಂತವರು ನಮ್ಮ ಹೋರಾಟದ ಒಡನಾಡಿಗಳು. ವಿವಿಧ ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ಸಂಘ-ಸಂಸ್ಥೆಗಳು ನೀಡಿದ ನಿಸ್ವಾರ್ಥ ಬೆಂಬಲದಿಂದಲೇ ಇಂದು ನಾವು ಈ ಮಣ್ಣನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.

ನಮ್ಮ ನೋವಿಗೆ ದನಿಯಾಗಿ, ಅಧಿಕಾರಶಾಹಿಯ ವಿರುದ್ಧದ ಈ ಸಮರದಲ್ಲಿ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ, ಈ ಗೆಲುವಿನ ನಡುವೆಯೇ ಸರ್ಕಾರವು ಭೂಮಿಯನ್ನು ಬಿಡುಗಡೆ ಮಾಡುವ ನೆಪದಲ್ಲಿ “ಶಾಶ್ವತ ವಿಶೇಷ ಕೃಷಿ ವಲಯ” ಎಂಬ ಅಸಂವಿಧಾನಿಕ ನಿಯಮವನ್ನು ಹೇರಿ ರೈತರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿದೆ.

ಸರ್ಕಾರದ ಈ ದ್ವಂದ್ವ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭೂಮಿ ಉಳಿಸಿಕೊಳ್ಳಲು ಹೋರಾಡಿದ ನಮಗೆ, ಇಂತಹ ಮಾರಕ ಷರತ್ತುಗಳನ್ನು ಎದುರಿಸುವುದು ಹೇಗೆ ಎಂಬುದು ತಿಳಿದಿದೆ. ರೈತರ ತಾಳ್ಮೆಯನ್ನು ಪರೀಕ್ಷಿಸದೆ, ಕೂಡಲೇ ಈ ಕಠಿಣ ನಿಯಮಗಳನ್ನು ಹಿಂಪಡೆದು ರೈತರಿಗೆ ಮುಕ್ತವಾಗಿ ಬದುಕುವ ಹಕ್ಕನ್ನು ನೀಡಬೇಕೆಂದು ನಾವು ಎಚ್ಚರಿಸುತ್ತಿದ್ದೇವೆಂದು ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರೇಗೌಡ ಆರೋಪಿಸಿದರು.

ಈ ಹಿಂದೆ ನಮ್ಮ ಒಂದು ಹೋರಾಟಕ್ಕೆ ಅಪ್ಪ  ಮಹಾನ್ ವಿಜಯವನ್ನು ಸಂಭ್ರಮಿಸಲು, ಹೋರಾಟದ ಸಂಗಾತಿಗಳನ್ನು ಗೌರವಿಸಲು ಮತ್ತು ಸರ್ಕಾರವನ್ನು ಎಚ್ಚರಿಸಲು ನಾವು’ಭೂಮಿ ಹಬ್ಬ’ವನ್ನು ಆಯೋಜಿಸಿದ್ದೇವೆ. ಈ ಸಂಭ್ರಮದ ಕ್ಷಣದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮ್ಮೆಲ್ಲರ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ಎಲ್ಲರೂ ಭೂಮಿಹಬ್ಬಕ್ಕೆ ತಪ್ಪದೆ ಬರುವಂತೆ ಆಹ್ವಾನಿಸಲಾಗುತ್ತಿದೆ.

ಈ ಒಂದು ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಸಾಹಿತಿಗಳು ಕಲಾವಿದರು ಪ್ರಗತಿಪ ರೈತರು ದಲಿತಕರ ಸಂಘಟನೆಗಳು ಹಾಗೂ ಜನಪರ ಕಾಳಜಿವುಳ್ಳ ಪ್ರಜ್ಞಾವಂತ ಗ್ರಾಮಸ್ಥರು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಸಮಾರಂಭ ಅದ್ದೂರಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ  ಭೂ ಸ್ವಾದೀನ ವಿರೋಧಿ ಹೋರಾಟ ಸಮಿತಿಯ ಪ್ರಮುಖ ಮುಖಂಡ ನಂಜಪ್ಪ ಅವರು ತಿಳಿಸಿದರು.

ಈ ವೇಳೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಮಾರೇಗೌಡ, ನಂಜಪ್ಪ, ಪ್ರಮೋದ್, ಗೋಪಿ, ಪ್ರಕಾಶ್, ಕೃಷ್ಣಪ್ಪ, ಲಕ್ಷ್ಮಮ್ಮ ಸೇರಿದಂತೆ ರೈತಪರ ಕನ್ನಡಪರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

0 Shares

By admin

Leave a Reply

Your email address will not be published. Required fields are marked *