0 Shares

ತಮಿಳುನಾಡಿನ ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ ಸಂಸ್ಥಾಪಕ ದಳಪತಿ ವಿಜಯ್ ಅವರಿಗೆ ಕೇಂದ್ರೀಯ ತನಿಖಾ ದಳ ಸಮನ್ಸ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ ಡಿಎಂಕೆ ಶಾಸಕ ಸೆಂಥಿಲ್ ಬಾಲಾಜಿ ಅವರಿಗೂ ಮಾರ್ಚ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ದೆಹಲಿಯಲ್ಲಿ ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ದಳಪತಿ ವಿಜಯ್ ಅವರಿಗೆ ಸಮನ್ಸ್ ನೀಡಲಾಗಿದೆ.

ಮಾರ್ಚ್ 15ರಂದು ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆಗಾಗಿ ಹಾಜರಾಗುವಂತೆ ವಿಜಯ್ ಅವರಿಗೆ ಸೂಚಿಸಲಾಗಿದೆ. ಈ ಹಿಂದೆ ಮಾರ್ಚ್ 10ರಂದು ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ, ರಾಜಕೀಯ ಕಾರ್ಯಕ್ರಮಗಳ ಕಾರಣದಿಂದ ವಿಜಯ್ ಅವರು 15 ದಿನಗಳ ಕಾಲಾವಕಾಶ ಕೋರಿದ್ದರು. ಅಲ್ಲದೇ, ದೆಹಲಿಯ ಬದಲಿಗೆ ಚೆನ್ನೈ ಅಥವಾ ತಮಿಳುನಾಡಿನ ಯಾವುದೇ ಕಚೇರಿಯಲ್ಲಿ ವಿಚಾರಣೆ ನಡೆಸುವಂತೆ ಅವರು ಮನವಿ ಮಾಡಿದ್ದರು.

ವಿಜಯ್ ಅವರ ಈ ಮನವಿಯನ್ನು ಸಿಬಿಐ ಪರಿಶೀಲಿಸಿ ಹೊಸ ದಿನಾಂಕಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಇನ್ನೊಂದೆಡೆ, ಕರೂರು ಶಾಸಕ ಸೆಂಥಿಲ್ ಬಾಲಾಜಿ ಅವರಿಗೆ ಮಾರ್ಚ್ 17ರಂದು ಹಾಜರಾಗಲು ಸಮನ್ಸ್ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಗೊಂದಲಕಾರಿ ವರದಿಗಳ ನಡುವೆ, ಸಿಬಿಐ ನೀಡಿರುವ ಸಮನ್ಸ್‌ನಂತೆ ನಾನು ಮಾರ್ಚ್ 17ರಂದು ಖುದ್ದಾಗಿ ಹಾಜರಾಗಿ ಅಗತ್ಯ ವಿವರಣೆಗಳನ್ನು ನೀಡಲಿದ್ದೇನೆ’ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಆಯೋಜಿಸಿದ್ದ ಬೃಹತ್ ರಾಜಕೀಯ ಸಮಾವೇಶದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಈ ಹಿಂದೆ ಜನವರಿ 12 ಮತ್ತು 19ರಂದು ಸಿಬಿಐ ಈಗಾಗಲೇ ವಿಜಯ್ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ತನಿಖಾ ಸಂಸ್ಥೆ ಈಗ ಮತ್ತೊಮ್ಮೆ ವಿಚಾರಣೆ ನಡೆಸಲು ಮುಂದಾಗಿದೆ. ಈ ನಡುವೆ ವಿಜಯ್ ಅವರ ಖಾಸಗಿ ಜೀವನ ಕೂಡ ಚರ್ಚೆಯಲ್ಲಿದೆ. ಪತ್ನಿ ಸಂಗೀತಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ತ್ರಿಷಾ ಜೊತೆ ವಿಜಯ್ ಕಾಣಿಸಿಕೊಂಡಿದ್ದು ಭಾರಿ ಚರ್ಚೆಗೆ ಕಾರಣ ಆಗಿದೆ.

0 Shares

By admin

Leave a Reply

Your email address will not be published. Required fields are marked *