0 Shares

ಬೆಂಗಳೂರು : ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರದಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆ ನಗರದ ಹಲವು ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಹೆಚ್ಚಿದ್ದು, ಈ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ.

ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪೂರಿಗೆ ಪತ್ರ ಬರೆದಿದ್ದಾರೆ.

ಹೋಟೆಲ್ ಉದ್ಯಮದ ಗೋಳು ಬಿಚ್ಚಿಟ್ಟ ಸೂರ್ಯ – ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿರುವ ಸಂಸದ ಸೂರ್ಯ, ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುಪಾಲು ವಾಣಿಜ್ಯ ಎಲ್‌ಪಿಜಿ ಮೇಲೆಯೇ ಅವಲಂಬಿತವಾಗಿದೆ.

ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹರಿದೀಪ್ ಸಿಂಗ್​ರನ್ನು ಭೇಟಿ ಮಾಡಲಿರುವ ಸಚಿವೆ – ಇದೇ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ವಿಷಯವನ್ನು ಸಚಿವ ಹರಿದೀಪ್ ಸಿಂಗ್ ಪುರಿ ಅವರ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಹೋಟೆಲ್ ಅಸೋಸಿಯೇಷನ್ ಎದುರಿಸುತ್ತಿರುವ ಸಮಸ್ಯೆಯ ಕುರಿತು ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ಅಸೋಸಿಯೇಷನ್ ನೀಡಿದ ಮನವಿ ಪತ್ರವನ್ನೂ ಸಚಿವರಿಗೆ ರವಾನಿಸಿದ್ದಾರೆ.

ಅಲ್ಲದೆ ಇಂದು (ಮಾರ್ಚ್​ 10) ಸಚಿವ ಹರಿದೀಪ್ ಸಿಂಗ್ ಪುರಿ ಅವರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕುರಿತು ಚರ್ಚೆ ನಡೆಸುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹೋಟೆಲ್ ಉದ್ಯಮಕ್ಕೆ ಯಾವುದೇ ವ್ಯತ್ಯಯವಾಗದಂತೆ ಎಲ್‌ಪಿಜಿ ಪೂರೈಕೆ ಮುಂದುವರಿಯಬೇಕು ಎಂಬುದು ಉದ್ಯಮಿಗಳ ಒತ್ತಾಯವಾಗಿದೆ.

0 Shares

By admin

Leave a Reply

Your email address will not be published. Required fields are marked *