ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆಗಳ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಹಣಕಾಸು ಆಯೋಗ ವಿಶೇಷ ಪರಿಹಾರವನ್ನು ಸೂಚಿಸಿದೆ. ಆಸ್ತಿ ತೆರಿಗೆ ಪಾವತಿಗೆ EMI ಯೋಜನೆ ಜೊತೆಗೆ ರಿಯಾಯಿತಿ ನೀಡುವಂತೆ ಶೀಫಾರಸು ಮಾಡಿದೆ.
ಐದನೇ ರಾಜ್ಯ ಹಣಕಾಸು ಆಯೋಗದ ವರದಿ ಪ್ರಕಾರ, ಈ ಕ್ರಮದಿಂದ ಆಸ್ತಿ ತೆರಿಗೆ ಸಂಗ್ರಹಣೆಯ ಕಾರ್ಯಕ್ಷಮತೆ ಹೆಚ್ಚಬಹುದು. ಪ್ರತಿ ವರ್ಷ ಒಮ್ಮೆಲೇ ದೊಡ್ಡ ಮೊತ್ತವನ್ನು ಪಾವತಿಸುವುದು ಕೆಲವರಿಗೆ ಕಷ್ಟವಾಗಬಹುದು. ಅದನ್ನು ತಿಂಗಳ ಕಂತುಗಳಾಗಿ ಪಾವತಿಸುವ ವ್ಯವಸ್ಥೆ ಮಾಡಿದರೆ ಪಾವತಿ ಸುಲಭವಾಗುತ್ತದೆ ಮತ್ತು ಜನರ ಮೇಲೆ ಇರುವ ಒತ್ತಡವೂ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದರ ಜೊತೆಗೆ ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರಿಗೆ ರಿಯಾಯಿತಿ ನೀಡುವಂತೆ ಕೂಡ ಆಯೋಗ ಶಿಫಾರಸು ಮಾಡಿದೆ. ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುತ್ತಿದ್ದಂತೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಕ್ರಮವನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಇದರಿಂದ ಜನರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲು ಉತ್ತೇಜನ ದೊರೆಯುತ್ತದೆ ಎಂದು ಆಯೋಗ ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್ ವೇಳೆಗೆ, BBMP ಸುಮಾರು 2.75 ಲಕ್ಷ ಡಿಫಾಲ್ಟರ್ಗಳನ್ನು ಗುರುತಿಸಿತ್ತು. ಇವರಿಂದ ಸುಮಾರು 786 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಇದಕ್ಕೂ ಮೊದಲು, ಬಾಕಿ ತೆರಿಗೆ ವಸೂಲಿಗಾಗಿ ಜಾರಿಗೊಳಿಸಿದ್ದ ಒನ್ ಟೈಂ ಸೆಟಲ್ಮೆಂಟ್ ಯೋಜನೆ ಮೂಲಕ BBMP ಸುಮಾರು 1,200 ಕೋಟಿ ಬಾಕಿ ತೆರಿಗೆಯನ್ನು ಸಂಗ್ರಹಿಸಿತ್ತು. ಈ ಯೋಜನೆಯಲ್ಲಿ ಬಾಕಿ ತೆರಿಗೆಯ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದು, ದಂಡದಲ್ಲಿ 50 ಶೇಕಡಾ ಕಡಿತ ನೀಡಲಾಗಿತ್ತು.
ರಾಜ್ಯ ಹಣಕಾಸು ಆಯೋಗದ ಪ್ರಕಾರ, ತೆರಿಗೆ ವ್ಯಾಪ್ತಿಗೆ ಇನ್ನೂ ಸೇರಿಸದಿರುವ ಆಸ್ತಿಗಳನ್ನು ಈ ವ್ಯಾಪ್ತಿಗೆ ತಂದರೆ ವರ್ಷಕ್ಕೆ ಸುಮಾರು 1,000 ಕೋಟಿ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆ ಇದೆ. ಇದಕ್ಕಾಗಿ GIS ಆಧಾರಿತ ಇ-ಖಾತಾ ವ್ಯವಸ್ಥೆಯನ್ನು ಆಸ್ತಿ ತೆರಿಗೆ ವ್ಯವಸ್ಥೆಯೊಂದಿಗೆ ಏಕೀಕರಿಸುವ ಕೆಲಸ ನಡೆಯುತ್ತಿದೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇನ್ನೂ ತೆರಿಗೆ ವ್ಯಾಪ್ತಿಗೆ ಸೇರಿಸದೇ ಉಳಿದಿವೆಎಂದು ವರದಿ ತಿಳಿಸಿದೆ.
ಅಲ್ಲದೆ ಹೊಸ ವಿದ್ಯುತ್ ಸಂಪರ್ಕಗಳ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು BESCOM ಡೇಟಾವನ್ನು ಆಸ್ತಿ ತೆರಿಗೆ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆ ಸ್ಥಾಪಿಸುವಂತೆ ಆಯೋಗ ಶಿಫಾರಸು ಮಾಡಿದೆ. ಇದಕ್ಕಾಗಿ GBA ಯ ಕಟ್ಟಡ ಪರವಾನಗಿ ಮಾಹಿತಿಯನ್ನು ಬಳಸುವಂತೆ ಸೂಚಿಸಲಾಗಿದೆ.
