0 Shares

ಬೆಂಗಳೂರು : ರಾಜಧಾನಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಹಾಹಾಕಾರ ಮಿತಿಮೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಅತಿ ಹೆಚ್ಚು ಗ್ಯಾಸ್ ವ್ಯಯವಾಗುವ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿಯನ್ ನಂತಹ ಸ್ನ್ಯಾಕ್ಸ್ ತಿಂಡಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕಡಿಮೆ ಗ್ಯಾಸ್ ಬಳಸಿ ಹೆಚ್ಚು ಜನರಿಗೆ ಉಣಬಡಿಸಬಹುದಾದ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ ನಂತಹ ರೈಸ್ ಐಟಂಗಳ ತಯಾರಿಕೆಗೆ ಹೋಟೆಲ್‌ಗಳು ಹೆಚ್ಚಿನ ಒಲವು ತೋರುತ್ತಿವೆ. “ದಯವಿಟ್ಟು ಹೆಚ್ಚು ಆಯಿಲ್ ಬಳಕೆಯಾಗುವ ತಿಂಡಿಗಳನ್ನು ಕೇಳಬೇಡಿ, ರೈಸ್ ಐಟಂಗಳನ್ನು ಆರ್ಡರ್ ಮಾಡಿ ಸಹಕರಿಸಿ” ಎಂದು ಹೋಟೆಲ್ ಮಾಲೀಕರು ಭಕ್ಷಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಕುಸಿದಿರುವುದರಿಂದ, ಇರುವ ಅಲ್ಪ ಪ್ರಮಾಣದ ಗ್ಯಾಸ್ ಬಳಸಿ ದಿನದ ವ್ಯಾಪಾರ ಮುಗಿಸುವುದು ಹೋಟೆಲ್ ಮಾಲೀಕರಿಗೆ ಸವಾಲಾಗಿದೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಸ್ನ್ಯಾಕ್ಸ್ ವಿಭಾಗಕ್ಕೆ ಹೋಟೆಲ್‌ಗಳು ‘ಕೋಕ್’ ನೀಡಿವೆ. ಇದರಿಂದ ಹೋಟೆಲ್‌ಗಳ ಒಟ್ಟಾರೆ ಆದಾಯದಲ್ಲಿ ಶೇ. 30 ರಿಂದ 40 ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಡೆ, ಬಜ್ಜಿ, ಪಕೋಡ ಮತ್ತು ಗೋಬಿಯಂತಹ ಸ್ನ್ಯಾಕ್ಸ್ ಐಟಂಗಳು ಹೋಟೆಲ್‌ಗಳಿಗೆ ಹೆಚ್ಚು ಲಾಭ ತಂದುಕೊಡುವ ಪದಾರ್ಥಗಳು. ಇವುಗಳ ಮಾರಾಟ ನಿಂತರೆ ಲಾಭದ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ.ಬೆಳಗ್ಗಿನ ಉಪಹಾರಕ್ಕೆ ವಡೆ-ಪೂರಿ ಇಲ್ಲದಿದ್ದರೆ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಬಜ್ಜಿ-ಬೋಂಡಾ ಸಿಗದಿದ್ದರೆ ಗ್ರಾಹಕರು ಹೋಟೆಲ್‌ಗೆ ಬರುವುದು ಕಡಿಮೆಯಾಗುತ್ತದೆ.

ಬರಿ ರೈಸ್ ಐಟಂ ತಿನ್ನಲು ಎಲ್ಲರೂ ಇಷ್ಟಪಡುವುದಿಲ್ಲ.ಸಂಜೆ ವೇಳೆ ಪಾರ್ಸೆಲ್ ಕೊಂಡೊಯ್ಯುವವರಲ್ಲಿ ಹೆಚ್ಚಿನವರು ಸ್ನ್ಯಾಕ್ಸ್ ಮತ್ತು ಎಣ್ಣೆ ತಿಂಡಿಗಳನ್ನೇ ಬಯಸುತ್ತಾರೆ. ಇದು ಸ್ಥಗಿತಗೊಂಡರೆ ಸಂಜೆಯ ವ್ಯಾಪಾರ ಶೇ. 50 ರಷ್ಟು ಕುಸಿಯಬಹುದು ಎಂದು ಹೇಳಲಾಗಿದೆ.

0 Shares

By admin

Leave a Reply

Your email address will not be published. Required fields are marked *