0 Shares

ಚಿತ್ರೀಕರಣ ಹಂತದಲ್ಲಿರುವ ಸಿನಿಮಾದ ಸೆಟ್‌ನಲ್ಲಿ ಯುವ ನಟಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಚ್ಚಿ ಪೊಲೀಸರು ನಿರ್ದೇಶಕ ರಂಜಿತ್ ಅವರನ್ನು ಬಂಧಿಸಿದ್ದಾರೆ. ರಂಜಿತ್ ವಿರುದ್ಧ ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕೇರಳದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಯುವ ನಟಿಯೊಬ್ಬರು ನೀಡಿದ ದೂರಿನನ್ವಯ ಕೊಚ್ಚಿ ಪೊಲೀಸರು ಇಡುಕ್ಕಿಯಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತೋಡುಪುಳದ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ರಂಜಿತ್‌ ಅವರನ್ನು ಬಂಧಿಸಿದ್ದಾರೆ. ಕಾರ್ಯಕ್ರಮವೊಂದಕ್ಕಾಗಿ ರಂಜಿತ್ ಅವರು ಪ್ರಯಾಣಿಸುತ್ತಿದ್ದಾಗ ಪೊಲೀಸರು ಅವರನ್ನು ತಡೆದು, ಸಾರ್ವಜನಿಕವಾಗಿ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಅತ್ಯಂತ ರಹಸ್ಯವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಕಾರ್ಯಾಚರಣೆಗೆ ಇಡುಕ್ಕಿ ಎಸ್‌ಪಿ ಸೂಚನೆ ಇತ್ತು ಎನ್ನಲಾಗಿದೆ. ಆರಂಭದಲ್ಲಿ ರಂಜಿತ್ ಅವರನ್ನು ತೋಡುಪುಳ ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಮುಂದಿನ ತನಿಖೆಗಾಗಿ ಎರ್ನಾಕುಲಂ ಸೆಂಟ್ರಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಪ್ರಸ್ತುತ ಚಿತ್ರೀಕರಣ ಹಂತದಲ್ಲಿರುವ ಸಿನಿಮಾವೊಂದರ ಸೆಟ್‌ನಲ್ಲಿ ಈ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ವೇಳೆ ರಂಜಿತ್ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡುವ ಮೊದಲು, ಸಂತ್ರಸ್ತೆಯು ಚಿತ್ರತಂಡದ ಆಂತರಿಕ ದೂರು ಸಮಿತಿಯ ಇದನ್ನು ತಂದಿದ್ದರು. ಸಮಿತಿಯು ನಟಿ ನೀಡಿದ ದೂರನ್ನು ಪರಿಶೀಲಿಸಿದ, ನಂತರ ಹೆಚ್ಚಿನ ಕ್ರಮಕ್ಕಾಗಿ ಕೇರಳ ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಿದೆ.

2024ರಲ್ಲಿ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರ ಅವರು ರಂಜಿತ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಆ ವಿವಾದದ ಬೆನ್ನಲ್ಲೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಂದು ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. “ನಾನು ಅಕಾಡೆಮಿಯ ಅಧ್ಯಕ್ಷ ಆಗಿದ್ದಕ್ಕೆ ಒಂದು ಗುಂಪು ನನ್ನ ವಿರುದ್ಧ ಪಿತೂರಿ ನಡೆಸುತ್ತಿದೆ. ಶ್ರೀಲೇಖಾ ಅವರ ಆರೋಪವೂ ಇದರ ಒಂದು ಭಾಗವಾಗಿದೆ” ಎಂದು ರಂಜಿತ್ ಹೇಳಿಕೊಂಡಿದ್ದರು.

ನ್ಯಾ. ಹೇಮಾ ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾ ಅವಕಾಶ ಬೇಕೆಂದರೆ, ನಟಿಯರು ಲೈಂಗಿಕವಾಗಿ ಸಹಕರಿಸಬೇಕು ಎಂಬ ಪರಿಸ್ಥಿತಿ ಇದೆ ಎಂದು ವರದಿ ನೀಡಿದ್ದ ಸಮಯದಲ್ಲಿಯೇ ರಂಜಿತ್‌ ವಿರುದ್ಧ ಶ್ರೀಲೇಖಾ ಮಾಡಿದ್ದ ಆರೋಪ ಅಂದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

0 Shares

By admin

Leave a Reply

Your email address will not be published. Required fields are marked *