0 Shares

ಬೆಂಗಳೂರು : ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು.

ಕೋರಮಂಗಲದ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಪದಕ” ಪ್ರದಾನ ಮಾಡಿ ಮಾತನಾಡಿದರು. ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ ಎಂದರು.

ಹಲವು ರೀತಿಯ ಅಪರಾಧ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಶಿಕ್ಷೆ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ಮುಂದಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುವ ಜೊತೆಗೆ ಪ್ರಮಾಣ ಹೆಚ್ಚಾಗಿರುವ ಅಪರಾಧಗಳ ನಿಯಂತ್ರಣದಲ್ಲೂ ನಾವು ಶ್ರಮ ಹಾಕಬೇಕಿದೆ ಎಂದು ಸೂಚಿಸಿದರು.

ಸೈಬರ್ ಅಪರಾಧಗಳು ಸೇರಿದಂತೆ ನಾನಾ ರೀತಿಯ ಅಪರಾಧಗಳನ್ನು ತಡೆಯಲು ತಂತ್ರಜ್ಞಾನದ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಿದೆ ಎಂದರು.

ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಾಗೂ ಅಸಹಾಯಕರ ನಮ್ಮ ಸರ್ಕಾರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು. ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಸುವ್ಯವಸ್ಥೆಗೂ ನೇರಾ ನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು. ಪದಕ ವಿಜೇತರೆಲ್ಲರಿಗೂ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಇವರ ಕಾರ್ಯ ಮತ್ತು ವೃತ್ತಿಪರತೆ ಇತರರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರುಗಳು ಉಪಸ್ಥಿತರಿದ್ದರು.‌

0 Shares

By admin

Leave a Reply

Your email address will not be published. Required fields are marked *