0 Shares

ಬೆಂಗಳೂರು : ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಮತ್ತೊಂದು ಶಾಕ್ ನೀಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ ವಿಚಾರದ ವಿಡಿಯೋ ವೈರಲ್ ಆಗಿತ್ತಲ್ಲದೆ, ಪ್ರಕರಣ ಸಹ ದಾಖಲಾಗಿತ್ತು.

ದೆಹಲಿಯಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದ ರಿಕ್ಕಿ ರೈ, ಆರ್‌ಟಿಒ ಮೂಲಕ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪಡೆಯಲು 5 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ, ಈ ನಂಬರ್ ಅನ್ನು ಅಧಿಕೃತವಾಗಿ ನೋಂದಣಿ ಮಾಡಿಸದೆಯೇ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿ ರಸ್ತೆಗೆ ಇಳಿಸಿದ್ದರು. ನಿಯಮದ ಪ್ರಕಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ನಂಬರ್ ಪ್ಲೇಟ್ ಬಳಸುವುದು ಕಾನೂನುಬಾಹಿರ ಹಾಗೂ ವಂಚನೆಯಾಗಿದೆ.

ಈ ಅಕ್ರಮದ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸರು ಕಾರನ್ನು ಸೀಜ್ ಮಾಡಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಆರ್‌ಟಿಒ ಅಧಿಕಾರಿಗಳು ಈ ಉಲ್ಲಂಘನೆಗಾಗಿ ಬರೋಬ್ಬರಿ 35 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ ರಸ್ತೆಯಲ್ಲಿ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದ ಪ್ರಕರಣವೂ ಭಾರಿ ಸುದ್ದಿಯಾಗಿತ್ತು.

ಈ ಘಟನೆ ಉದ್ದೇಶಪೂರ್ವಕ ಡ್ರಿಫ್ಟಿಂಗ್ ಆಗಿರದೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಅಥವಾ ರಸ್ತೆಯ ಮರಳಿನ ಕಾರಣದಿಂದ ಉಂಟಾದ ಆಕಸ್ಮಿಕ ಸ್ಕಿಡ್ ಆಗಿದೆ ಎಂದು ರಿಕ್ಕಿ ರೈ ಪರ ವಕೀಲ ಸಮರ್ಥಿಸಿಕೊಂಡಿದ್ದರು. ಮತ್ತೊಂದೆಡೆ, ಈ ಸರಣಿ ಕೇಸ್‌ಗಳು ದಾಖಲಾಗುತ್ತಿದ್ದಂತೆ ರಿಕ್ಕಿ ರೈ ರಷ್ಯಾಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

0 Shares

By admin

Leave a Reply

Your email address will not be published. Required fields are marked *