ಬಾರಾಮತಿ : ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ನಿಧನದ ಬಳಿಕ ತೆರವಾಗಿರುವ ಬಾರಾಮತಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ.
ಅಂತಿಮ ಕ್ಷಣದಲ್ಲಿ ಇದೀಗ ಚುನಾವಣಾ ಕಣದಿಂದ ಕಾಂಗ್ರೆಸ್ ಹಿಂದೆ ಸರಿದಿದ್ದು ಸುನೇತ್ರ ಪವಾರ್ ಅವರ ಗೆಲುವಿಗೆ ಮಣೆ ಹಾಕಿಕೊಟ್ಟಿದೆ. ಶರದ್ ಪವಾರ್ ಮತ್ತು ಸುಪ್ರಿಯಾ ಸುಲೇ ಸೇರಿದಂತೆ ಹಿರಿಯ ಎನ್‌ಸಿಪಿ (ಎಸ್‌ಪಿ) ನಾಯಕರ ಒತ್ತಾಯದ ಕಾರಣದಿಂದ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ ಎನ್ನಲಾಗಿದೆ.
ವರ್ಷದ ಆರಂಭದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಎನ್‌ಸಿಪಿ ಮಾಜಿ ನಾಯಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಸುನೇತ್ರ ಅವರ ಪತಿ ಅಜಿತ್ ಪವಾರ್ ನಿಧನರಾಗಿದ್ದು, ಅವರ ಬಳಿಕ ಬಾರಾಮತಿ ಕ್ಷೇತ್ರಕ್ಕೆ ಸುನೇತ್ರ ಅವರನ್ನು ಎನ್‌ಸಿಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಎನ್‌ಸಿಪಿ ನಾಯಕರ ಒತ್ತಾಯದ ಕಾರಣದಿಂದ ಕಾಂಗ್ರೆಸ್ ಈಗ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ಹಿಂದಕ್ಕೆ ಕರೆಸಿದೆ. ಇದರಿಂದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಸುನೇತ್ರ ಪವಾರ್ ಅವರು ಅವಿರೋಧವಾಗಿ ಗೆಲ್ಲಲಿದ್ದಾರೆ.
ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ನೇತೃತ್ವದ ಹಿರಿಯ ಎನ್‌ಸಿಪಿ ನಾಯಕರ ನಿಯೋಗವು ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು ಎನ್ನಲಾಗಿದೆ.
ಜನವರಿಯಲ್ಲಿ ಬಾರಾಮತಿಯಲ್ಲಿ ಇಳಿಯುವ ವೇಳೆ ವಿಮಾನ ಅಪಘಾತಕ್ಕೀಡಾಗಿ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿ ಶಾಸಕರಾಗಿದ್ದ ಅವರ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಅವರ ಪತ್ನಿ ಸುನೇತ್ರ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.
ಮಹಾರಾಷ್ಟ್ರದಲ್ಲಿ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ, ಗುರುವಾರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಅವರು ಬಾರಾಮತಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ತಿಳಿಸಿದರು.
ಭಾರತೀಯ ಚುನಾವಣಾ ಆಯೋಗವು ಬಿಜೆಪಿಯ ಬಿ-ತಂಡದಂತೆ ಕಾರ್ಯನಿರ್ವಹಿಸುತ್ತಿದೆ. ಬಾರಾಮತಿ ಕ್ಷೇತ್ರದಲ್ಲಿ ಸೈದ್ಧಾಂತಿಕ ಯುದ್ಧ ಉಂಟು ಮಾಡಲು ಸುನೇತ್ರಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯುವಂತೆ ಅದು ಮಾಡಿತ್ತು. ಆದರೆ ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಅಜಿತ್ ಪವಾರ್ ಅವರ ಮೇಲಿನ ಗೌರವದಿಂದಾಗಿ ಪಕ್ಷವು ಅಂತಿಮವಾಗಿ ತನ್ನ ನಿಲುವನ್ನು ಬದಲಾಯಿಸಿದೆ ಎಂದು ಅವರು ಹೇಳಿದರು.
