0 Shares

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚುನಾವಣಾ ಗುದ್ದಾಟದಲ್ಲಿ ಎಲ್‌ಪಿಜಿ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ತೀವ್ರ ವ್ಯತ್ಯಯವಾಗಿ, ಆಟೋ ಚಾಲಕರುಗಳ ಬಡ ಕುಟುಂಬಗಳು ಬೀದಿಗೆ ತಳ್ಳಲ್ಪಡುತ್ತಿವೆ. ಕೂಡಲೇ ರಾಜ್ಯ ಸರ್ಕಾರವು ಆಟೋ ಚಾಲಕರ ಕುಟುಂಬಗಳ ರಕ್ಷಣೆಗೆ ಧಾವಿಸಬೇಕು ಹಾಗೂ ಈ ತಕ್ಷಣದಿಂದಲೇ 15 ಸಾವಿರ ರೂ.ಗಳ ಸಹಾಯಧನವನ್ನು ಘೋಷಿಸಬೇಕೆಂದು ಆಮ್ ಆದ್ಮಿ ಪಕ್ಷ ಇಂದು ಆಗ್ರಹಿಸಿತು.

ಪಕ್ಷದ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೊಲ್ಲಿ ಯುದ್ಧದ ನೇರ ಪರಿಣಾಮಗಳನ್ನು ಅರಿಯುವಲ್ಲಿ ವಿಫಲಗೊಂಡಿರುವ ಕೇಂದ್ರ ಸರ್ಕಾರವು ರಾಷ್ಟ್ರದಾದ್ಯಂತ ಸೂಕ್ತ ಇಂಧನ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಮತ್ತೊಂದು ಕಡೆ ರಾಜ್ಯ ಸರ್ಕಾರವು ಉಪಚುನಾವಣೆಯ ಭರಾಟೆಯಲ್ಲಿ ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿರುವ ಕಾಲ ಸಂತೆ ಕೋರರನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ.

ಗ್ಯಾಸ್ ಸಿಲಿಂಡರ್, ಎಲ್‌ಪಿಜಿ ಬಂಕ್‌ಗಳಲ್ಲಿ ಅವ್ಯಾಹತವಾಗಿ ದುಪ್ಪಟ್ಟು ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ರಾಜಾರೋಷವಾಗಿ ಅನುವು ಮಾಡಿಕೊಟ್ಟಿರುವುದು ದುರದೃಷ್ಟಕರ. ಸರ್ಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಈ ಕಾಳಸಂತೆ ಕೋರರನ್ನು ಮಟ್ಟ ಹಾಕದೆ ಕಣ್ಮುಚ್ಚಿ ಕುಳಿತಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಆಟೋ ಚಾಲಕರುಗಳು ಕಳೆದ 15 ದಿವಸಗಳಿಂದ ಆಟೋಗಳನ್ನು ರಸ್ತೆಗೆ ಇಳಿಸಲಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ದೈನಂದಿನ ಗಳಿಕೆಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿರುವ ಆಟೋ ಚಾಲಕರು ಸೇರಿದಂತೆ ಸಣ್ಣ ಹೋಟೆಲ್ ಮಾಲೀಕರುಗಳು, ಗಿಗ್ ಕಾರ್ಮಿಕರ ರಕ್ಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ಈ ತಕ್ಷಣದಿಂದಲೇ 15 ಸಾವಿರ ರೂ.ಗಳ ಸಹಾಯಧನವನ್ನು ಘೋಷಿಸಬೇಕು ಎಂದು ಆಯುಬ್ ಖಾನ್ ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ಆಟೋ ಘಟಕದ ಬೆಂಗಳೂರು ನಗರ ಅಧ್ಯಕ್ಷ ಅನಿಲ್ ಕುಮಾರ್, ಸಾಮಾಜಿಕ ಹೋರಾಟಗಾರ ಎ.ಜೆ. ಖಾನ್ ಸೇರಿದಂತೆ ಅನೇಕ ಆಟೋ ಚಾಲಕರು, ಹೋರಾಟಗಾರರು, ಪದಾಧಿಕಾರಿಗಳು ಹಾಗೂ ಆಟೋ ಚಾಲಕರುಗಳು ಭಾಗವಹಿಸಿದ್ದರು.

0 Shares

By admin

Leave a Reply

Your email address will not be published. Required fields are marked *