ವಿಜಯಪುರ : ಇತ್ತೀಚೆಗೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪತ್ತೆಗೆ ಕೇಂದ್ರ ಸರ್ಕಾರ ನೂತನ ಸಾಫ್ಟ್ವೇರ್ಗಳನ್ನು ಬಿಡುಗಡೆ ಮಾಡಿದೆ. ಸಿಇಐಆರ್ ಸಾಫ್ಟ್‌ವೇರ್ ಮೂಲಕ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಲ್ಲಿ ಕಳ್ಳತನವಾಗಿದ್ದ, 3 ಕೋಟಿ ರೂ ಬೆಲೆ ಬಾಳುವ ಮೊಬೈಲ್‌ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಕಳ್ಳತನವಾಗಿದ್ದ, ಮೊಬೈಲ್‌ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ ಕಳೆದುಹೋಗಿದ್ದ 340 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ವಿಜಯಪುರ ಹಾಗೂ ಗ್ರಾಮೀಣ ಉಪ ವಿಭಾಗಗಳ ವ್ಯಾಪ್ತಿಯ 26 ಪೊಲೀಸ್ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ 340 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಪತ್ತೆಯಾದ ಮೊಬೈಲ್‌ಗಳ ಒಟ್ಟು ಮೌಲ್ಯ ಅಂದಾಜು ಸುಮಾರು 3 ಕೋಟಿ ರೂಪಾಯಿಗೂ ಅಧಿಕ ತಿಳಿದುಬಂದಿದೆ.
ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ತಂತ್ರಜ್ಞಾನದ ಮೂಲಕ ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಬಳಿಕ ಕಾನೂನು ಪ್ರಕಾರ ಮೊಬೈಲ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ತಕ್ಷಣ ದೂರು ದಾಖಲಿಸಿದರೆ, ಶೀಘ್ರ ಪತ್ತೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. CEIR ಹಾಗೂ ಇತರೆ ತಂತ್ರಜ್ಞಾನಗಳ ಮೂಲಕ ಸೂಕ್ತ ಭದ್ರತೆಗಳನ್ನು ಕೈಗೊಳ್ಳಬೇಕೆಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷಗಳಿಂದ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿತ್ತು. ಇದೇ ವೇಳೆ ಕೇಂದ್ರ ಸರ್ಕಾರ ಸಿಇಐಆರ್ ಸಾಫ್ಟ್‌ವೇರ್ ಅನುಷ್ಠಾನ ಹಾಗೂ ಸಾಥಿ ಆ್ಯಪ್ ಬಿಡುಗಡೆ ಮಾಡಿದ್ದು, ತನಿಖೆಗೆ ಸಾಕಷ್ಟು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ 340 ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದೂರು ದಾಖಲಾತಿಯ ಆಧಾರದ ಮೇಲೆ ಆಯಾ ಮೊಬೈಲ್ ಮಾಲೀಕರುಗಳಿಗೆ ಕಾನೂನು ಪ್ರಕಾರ ಮೊಬೈಲ್‌ಗಳನ್ನು ವಾಪಸ್ ನೀಡಲಾಗಿದೆ. ಸಾರ್ವಜನಿಕರು ಸಹ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಕಳ್ಳತನ ತಡೆಯುವುದಕ್ಕೆ ಹಾಗೂ ಕಳೆದುಕೊಳ್ಳದಂತೆ ಜಾಗೃತ ವಹಿಸಬೇಕಿದೆ.
