ಬೆಂಗಳೂರು : ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಸವಾರರಿಗೆ ಈಗ ಪಾರ್ಕಿಂಗ್ ಬಿಸಿ ತಟ್ಟಲಿದೆ. ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಮುಕ್ತಿ ನೀಡಲು ಮತ್ತು ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಮುಂದಾಗಿರುವ ಜಿಬಿಎ ಅಧಿಕಾರಿಗಳು, ‘ಪೇ ಆ್ಯಂಡ್ ಪಾರ್ಕಿಂಗ್’ ವ್ಯವಸ್ಥೆಗೆ ಮತ್ತಷ್ಟು ರಸ್ತೆಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ.
ಈಗಾಗಲೇ ನಗರದ ಅನೇಕ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ಜಾರಿಯಲ್ಲಿದೆ. ಇದಕ್ಕೆ ಇನ್ನಷ್ಟು ರಸ್ತೆಗಳನ್ನು ಸೇರಿಸಲು ಸಿದ್ಧತೆ ಮಾಡಲಾಗುತ್ತಿದೆ. ಹೊಸ ಪಾರ್ಕಿಂಗ್ ನೀತಿಯ ಭಾಗವಾಗಿ ಬೆಂಗಳೂರು ದಕ್ಷಿಣ ವಲಯದ ಜಯನಗರದ ಬರೋಬ್ಬರಿ 42 ರಸ್ತೆಗಳನ್ನು ಪೇ ಆ್ಯಂಡ್ ಪಾರ್ಕಿಂಗ್ ವಲಯಗಳನ್ನಾಗಿ ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಇನ್ನು ಮುಂದೆ ವಾಹನ ನಿಲ್ಲಿಸಬೇಕಾದರೆ ನಿಗದಿತ ಶುಲ್ಕ ಪಾವತಿಸುವುದು ಅನಿವಾರ್ಯವಾಗಲಿದೆ.
ಈ ಮೂಲಕ ಪಾಲಿಕೆಯು ತನ್ನ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಪಾಲಿಕೆಯ ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಸೇರಿದಂತೆ ಲಕ್ಷಾಂತರ ರೂಪಾಯಿ ಪಾವತಿಸಿರುತ್ತೇವೆ. ಈಗ ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸುವುದಕ್ಕೂ ಹಣ ವಸೂಲಿ ಮಾಡುವುದು ಜನಸಾಮಾನ್ಯರ ಮೇಲೆ ಹೊರೆ ಹೇರಿದಂತೆ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.
ನಗರದಲ್ಲಿ ಸಂಚರಿಸುವ ಲಕ್ಷಾಂತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಶುಲ್ಕದ ಹೆಸರಿನಲ್ಲಿ ಜನರನ್ನು ಪೀಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ತಡೆಯಲು ಮತ್ತು ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಏಪ್ರಿಲ್ 5ರಿಂದ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರು ಮಾಡಲಾಗಿದೆ.
ಸಾರ್ವಜನಿಕರ ಆಕ್ರೋಶ ಮತ್ತು ಕಿರುಕುಳದ ದೂರುಗಳಿಂದಾಗಿ 2022ರಲ್ಲಿ ಟೋಯಿಂಗ್ ಅನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಜಿಬಿಎ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಟೋಯಿಂಗ್ ಪುನರಾರಂಭಿಸಿದ್ದಾರೆ. ಇದಕ್ಕೂ ಸಾವರ್ಜನಿಕ ವಲುಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
