0 Shares

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾದ ಬಿಡುಗಡೆಗೆ ಈಗ ದೊಡ್ಡ ಅಡೆತಡೆ ಎದುರಾಗಿದೆ. ಚಿತ್ರದ ಕಥೆ ಮತ್ತು ಶೀರ್ಷಿಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ ಹೊರತಾಗಿಯೂ, ಈ ವಾರ್ ಡ್ರಾಮಾ ಸದ್ಯಕ್ಕೆ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ‘ಮಾತೃಭೂಮಿ’ ಚಿತ್ರವು ಪ್ರಮಾಣಪತ್ರಕ್ಕಾಗಿ ಇನ್ನೂ ಸೆನ್ಸಾರ್ ಮಂಡಳಿಗೆ ಸಲ್ಲಿಕೆಯಾಗಿಲ್ಲ. ಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಅನುಸರಿಸಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಚಿತ್ರತಂಡ ಈಗ ಚರ್ಚೆ ನಡೆಸುತ್ತಿದೆ.

‘ಈ ಹಂತದಲ್ಲಿ ಅಡೆತಡೆ ಇಲ್ಲದೇ ಚಿತ್ರದ ರಿಲೀಸ್‌ಗಾಗಿ ಮುಂದಿನ ದಾರಿ ಏನು ಎಂಬುದನ್ನು ತಂಡವು ಪರಿಶೀಲಿಸುತ್ತಿದೆ. ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ಸಿಬಿಎಫ್‌ಸಿ ಇವುಗಳಲ್ಲಿ ಯಾವುದೇ ವಿಭಾಗದ ಅಧಿಕಾರಿಗಳು ಈವರೆಗೆ ಸಿನಿಮಾವನ್ನು ನೋಡಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ‘ಮಿಡ್ ಡೇ’ ವರದಿ ಮಾಡಿದೆ.

2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರವನ್ನು ಈ ಮೊದಲು ರೂಪಿಸಲಾಗಿತ್ತು. ಆದರೆ 2025ರ ಡಿಸೆಂಬರ್‌ನಲ್ಲಿ ಟೀಸರ್ ಬಿಡುಗಡೆಯಾದಾಗ ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು. ಚಿತ್ರವು ಸತ್ಯವನ್ನು ತಿರುಚುತ್ತಿದೆ ಎಂಬ ಆರೋಪ ಎದುರಾಯಿತು. ಆದ್ದರಿಂದ ಕೆಲವು ಅಂಶಗಳನ್ನು ಬದಲಿಸುವುದು ಅನಿವಾರ್ಯ ಆಯಿತು.

ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ, ಚಿತ್ರದಿಂದ ಚೀನಾ ಮತ್ತು ಗಲ್ವಾನ್ ಸಂಘರ್ಷದ ನೇರ ಉಲ್ಲೇಖಗಳನ್ನು ತೆಗೆದುಹಾಕುವಂತೆ ಭಾರತೀಯ ಅಧಿಕಾರಿಗಳು ಫೆಬ್ರವರಿಯಲ್ಲಿ ಚಿತ್ರತಂಡಕ್ಕೆ ಮೌಖಿಕ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದ ಶೀರ್ಷಿಕೆಯನ್ನು ‘ಮಾತೃಭೂಮಿ’ ಎಂದು ಬದಲಿಸಲಾಯಿತು.

ನಿರ್ದೇಶಕ ಅಪೂರ್ವ ಲಾಖಿಯಾ ಅವರು ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಆದರೆ ಚಿತ್ರವನ್ನು ಮೊದಲಿನಿಂದ ಹೊಸದಾಗಿ ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದ ವೇಳೆ ಪೋಷಕ ಪಾತ್ರಗಳ ಕುಟುಂಬ ಮತ್ತು ಪ್ರೇಮ ಕಥೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇಷ್ಟೆಲ್ಲ ಬದಲಾವಣೆ ಮಾಡಿದ ನಂತರ ಸಿನಿಮಾದ ಮೂಲ ಅಂಶವೇ ಇಲ್ಲದಂತಾಗುವ ಸಾಧ್ಯತೆ ಇದೆ.

0 Shares

By admin

Leave a Reply

Your email address will not be published. Required fields are marked *