ಬೆಂಗಳೂರು : ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಹೀಗಿದ್ದರೂ ತಮ್ಮ ಆಪ್ತರ ರಕ್ಷಣೆಗೆ ಮುಂದಾಗದ ಮುಖ್ಯಮಂತ್ರಿಗಳ ನಡೆಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ.
ಸಿದ್ದರಾಮಯ್ಯ ತಮ್ಮ ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ. ಅಸಹಾಯಕರಂತೆ ಅವರು ವರ್ತಿಸುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರಿ ಹಿನ್ನಡೆ ಆಗುತ್ತದೆ. ಪಕ್ಷಕ್ಕೆ ಕೆಲಸ ಮಾಡಿದವರನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗ್ತಿದೆ. ಟಾರ್ಗೆಟ್ ಆಗ್ತಿರೋದು ಕೇವಲ ವ್ಯಕ್ತಿಗಳಲ್ಲ, ಬೇರೆ ಬೇರೆ ಸಮುದಾಯಗಳು. ಹೀಗಾಗಿ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಿವೆ ಎಂದು ಸಿದ್ದರಾಮಯ್ಯ ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ, ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ಧ ಕ್ರಮ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಹೀಗೆ ಆಗ್ತಿದ್ದು, ಸಿಎಂ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ ಅನ್ನೋದು ನಮಗೂ ಬೇಸರ ತಂದಿದೆ. ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ.
ಆದರೆ ಅವರಿಂದ ಇಂತಹ ಅಸಹಾಯಕತೆ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿ ಎಂದು ಈ ಹಿಂದೆ ಶಾಮನೂರು ಹೇಳಿದ್ದರು. ಆಗ ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಇನ್ನೊಂದು ಪಕ್ಷಕ್ಕೆ ಮತಹಾಕಿ ಅನ್ನೋದು ಅಶಿಸ್ತು ಅಲ್ಲವೇ? ರಾಜ್ಯ ನಾಯಕರ ಜತೆ ಚರ್ಚಿಸಿಯೇ ಹೈಕಮಾಂಡ್ ತೀರ್ಮಾನಿಸುವುದು ಎಂದು ಹೇಳಿದ್ದಾರೆ.
ಹೈಕಮಾಂಡ್ನಿಂದ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಹೆಚ್.ಸಿ.ಬಾಲಕೃಷ್ಣ, ಏನಾಗಿದೆ ಅಂತಾ ನಾವು ಕೂಡ ಇನ್ನೂ ಗೊಂದಲದಲ್ಲಿ ಇದ್ದೇವೆ. ಪಕ್ಷಕ್ಕೆ ವಿರೋಧವಾಗಿ ಯಾರೇ ಕೆಲಸ ಮಾಡಿದ್ರೂ ಟಾರ್ಗೆಟ್ ಆಗ್ತಾರೆ. ಸಿಎಂ, ಡಿಸಿಎಂ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ಅವರನ್ನೂ ಟಾರ್ಗೆಟ್ ಮಾಡ್ತಾರೆ.
ಪಕ್ಷಕ್ಕಿಂತ ದೊಡ್ಡ ವ್ಯಕ್ತಿ ಇಲ್ಲಿ ಯಾರೂ ಇಲ್ಲ, ಪಕ್ಷವೇ ದೊಡ್ಡದು. ಮುಸ್ಲಿಂ ಧರ್ಮ ಗುರುಗಳು ಅವರವರ ಅಭಿಪ್ರಾಯ ಹೇಳಿದ್ದಾರೆ. ನಾವು ಒಂದು ಪಕ್ಷದಲ್ಲಿ ಇದ್ದಾಗ ಆ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಪಕ್ಷದ ಚೌಕಟ್ಟು ಮೀರಿ ನಡೆದಾಗ ಯಾವುದೇ ಜಾತಿ ಮುಂದೆ ಬರಲ್ಲ. ಇದರಲ್ಲಿ ಜಾತಿ ಪ್ರಶ್ನೆ ಎತ್ತೋದು ಸೂಕ್ತ ಅಲ್ಲ ಅಂತಾ ನನ್ನ ಅಭಿಪ್ರಾಯ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಣ್ಣ, ಎಂ.ಬಿ.ಪಾಟೀಲ್ ಮತ್ತು ಸಲೀಂ ಅಹ್ಮದ್ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಆಗುತ್ತಿರುವ ವಿಚಾರ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
