ಬೆಂಗಳೂರು : ನಾಗರಿಕರಿಂದ ಬಂದಂತಹ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸಲು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇಂದು ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿರುವ ನಗರ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ “ಫೋನ್–ಇನ್ ಕಾರ್ಯಕ್ರಮ” ದಲ್ಲಿ ನಾಗರಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದ ವೇಳೆ ವಿವಿಧ ವಾರ್ಡ್‌ಗಳಿಂದ ಮುಖ್ಯವಾಗಿ ಘನತ್ಯಾಜ್ಯ ಸಮಸ್ಯೆ, ರಸ್ತೆ ದುರಸ್ತಿ ಸೇರಿದಂತೆ ಇನ್ನಿತರೆ ದೂರುಗಳನ್ನು ಖುದ್ದಾಗಿ ಆಲಿಸಿದ ಆಯುಕ್ತರು, ತ್ವರಿತ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಾಗರಿಕರಿಂದ 51 ಕರೆಗಳ ಮೂಲಕ 61 ಅಹವಾಲುಗಳ ಸ್ವೀಕಾರ : ಇಂದು ನಡೆದ ಫೋನ್–ಇನ್ ಕಾರ್ಯಕ್ರಮದಲ್ಲಿ ಒಟ್ಟು 51 ಕರೆಗಳಿಂದ 61 ಅಹವಾಲುಗಳು ದಾಖಲಾಗಿವೆ. ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ, ತಕ್ಷಣ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕಳೆದ 29 ವಾರಗಳ ಫೋನ್–ಇನ್ ಕಾರ್ಯಕ್ರಮದ ವಿವರ : ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಸೆಪ್ಟೆಂಬರ್ 26 ರಿಂದ ಪ್ರಾರಂಭಿಸಿರುವ ಫೋನ್-ಇನ್ ಕಾರ್ಯಕ್ರಮದಲ್ಲಿ ಕಳೆದ 29 ವಾರಗಳಲ್ಲಿ ಒಟ್ಟು 1690 ಅಹವಾಲುಗಳು ದಾಖಲಾಗಿದ್ದು, ಅವುಗಳಲ್ಲಿ 1240 ಅಹವಾಲುಗಳಿಗೆ ಸೂಕ್ತ ಕ್ರಮ ಕೈಗೊಂಡು ಇತ್ಯರ್ಥಪಡಿಸಲಾಗಿದೆ. ಇತರೆ ನಗರ ಪಾಲಿಕೆಗಳು ಹಾಗೂ ಇಲಾಖೆಗಳ ಸಂಬಂಧಿಸಿದ ದೂರುಗಳನ್ನು ಸಂಬಂಧಪಟ್ಟವರಿಗೆ ರವಾನಿಸಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಇನ್ನು ಬಾಕಿ ಉಳಿದ 322 ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ನಿರ್ದೇಶನ ನೀಡಲಾಗಿದೆ.
ನಿರಂತರವಾಗಿ ಪ್ರತಿ ಶುಕ್ರವಾರ ಫೋನ್–ಇನ್ ಕಾರ್ಯಕ್ರಮ : ನಾಗರಿಕರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿ, ಕೂಡಲೇ ಪರಿಹಾರ ನೀಡುವ ಪ್ರಯತ್ನದಲ್ಲಿ ಆಯುಕ್ತರಿಂದ ಫೋನ್–ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಕಾರ್ಯಕ್ರಮವನ್ನು ನಿರಂತರವಾಗಿ ಪ್ರತಿವಾರ ಕೈಗೊಳ್ಳಲಾಗುವುದು.
ಇಂದಿನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಪ್ರಮುಖ ದೂರುಗಳು :
- ರಸ್ತೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಯ ಬಗ್ಗೆ 26 ದೂರುಗಳು ಬಂದಿದೆ.
- ತ್ಯಾಜ್ಯ ನಿರ್ವಹಣೆ ಸಂಬಂಧ 13 ಅರ್ಜಿಗಳು.
- ಬೀದಿನಾಯಿಗಳ ಸಮಸ್ಯೆಗಳ ಬಗ್ಗೆ 5 ಅರ್ಜಿಗಳು
- ಬೀದಿ ದೀಪಗಳ ನಿರ್ವಹಣೆ ಕುರಿತು 4 ಅರ್ಜಿಗಳು
- ಮರದ ಕೊಂಬೆಗಳನ್ನು ಕತ್ತರಿಸಲು 3 ಮನವಿಗಳು.
ಹೆಚ್ಚಿನ ಮಾಹಿತಿಗಾಗಿ ಇಂದಿನ ಹಾಗೂ ಪ್ರತಿ ಶುಕ್ರವಾರ ನಾಗರಿಕರಿಂದ ಸ್ವೀಕರಿಸಿದ ಅಹವಾಲುಗಳ ಅಂಕಿ-ಅಂಶಗಳ ಪಟ್ಟಿ ಲಗತ್ತಿಸಲಾಗಿದೆ. ಈ ವೇಳೆ ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
