ಕಂಗನಾ ರನೌತ್, ಬಾಲಿವುಡ್ನಲ್ಲಿದ್ದರೂ ಬಾಲಿವುಡ್ನವರಲ್ಲ ಸ್ಟಾರ್ ನಟಿ. ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಪ್ರಮುಖರಾಗಿರುವ ಕಂಗನಾ ರನೌತ್ ನಟನೆಗೆ ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಸಂಸದೆಯೂ ಆಗಿರುವ ಕಂಗನಾ ರನೌತ್, ಹಲವು ವರ್ಷಗಳಿಂದಲೂ ಬಾಲಿವುಡ್ ಮಂದಿಯನ್ನು, ಬಾಲಿವುಡ್ನ ಪದ್ಧತಿಗಳನ್ನು ಟೀಕಿಸುತ್ತಲೇ ಬಂದಿದ್ದಾರೆ.
ಅದರಲ್ಲೂ ಕರಣ್ ಜೋಹರ್, ಮಹೇಶ್ ಭಟ್ ಇನ್ನೂ ಕೆಲವು ‘ದೊಡ್ಡವರ’ ಬಗ್ಗೆ ಬಹಿರಂಗ ಟೀಕೆಗಳನ್ನು ಮಾಡಿದ್ದಾರೆ. ಇದೀಗ ಕಂಗನಾ, ಸಂದರ್ಶನವೊಂದರಲ್ಲಿ ತಮ್ಮ ಮೇಲೆ ಬಾಲಿವುಡ್ನ ಕೆಲವರು ಮಾಡಿದ್ದ ನೀಚ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಹಿಂದೊಮ್ಮೆ ಕಂಗನಾ ರನೌತ್ ಅವರು ನಟ ಅಧ್ಯಯನ್ ಸುಮನ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ರಾಜ್ 2’ ಸಿನಿಮಾನಲ್ಲಿ ನಟಿಸಿದ್ದರು. ಆಗ ಪರಸ್ಪರ ರಿಲೇಷನ್ನಲ್ಲಿದ್ದರು.
ಆದರೆ ಒಂದೇ ವರ್ಷಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತು. ಆ ಸಮಯದಲ್ಲಿ ಕಂಗನಾ ರನೌತ್ ವಿರುದ್ಧ ಅಧ್ಯಯನ್, ದೈಹಿಕ ಮತ್ತು ಮಾನಸಿಕ ಹಲ್ಲೆಯ ಆರೋಪ ಮಾಡಿ ದೂರು ಸಹ ದಾಖಲಿಸಿದ್ದರು. ಈ ವಿಷಯವನ್ನು ಸಂದರ್ಶನದಲ್ಲಿ ನಟಿ ಕಂಗನಾ ರನೌತ್ ಹೇಳಿಕೊಂಡಿದ್ದಾರೆ. ‘ನನ್ನ ವಿರುದ್ಧ ಆಗ ಏನೇನೋ ಆರೋಪಗಳನ್ನು ಮಾಡಲಾಗಿತ್ತು. ಇವಳು ಮಾಟಗಾತಿ, ರಾಕ್ಷಸಿ, ರಕ್ತ ಕುಡಿಯುತ್ತಾಳೆ. ಕಪ್ಪು ಬಟ್ಟೆ ಇರಿಸಿಕೊಂಡು, ಕತ್ತಲೆ ಕೋಣೆಯಲ್ಲಿ ಕುಳಿತು, ‘ಕಾಲಾ ಜಾದೂ’ (ಮಾಟ) ಮಾಡುತ್ತಾಳೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು.
ನನ್ನ ಕರಿಯರ್ ಅನ್ನು ಮುಗಿಸಿಯೇ ಬಿಡಬೇಕು ಎಂದುಕೊಂಡು ಅವರು ಹೀಗೆಲ್ಲ ಸುದ್ದಿಗಳನ್ನು ಹಬ್ಬಿಸಿದ್ದರು’ ಎಂದು ಕಂಗನಾ ರನೌತ್ ಹೇಳಿದ್ದಾರೆ. ‘ಅವರು (ಬಾಲಿವುಡ್ನ ಕೆಲ ಮಂದಿ) ನನ್ನ ವಿರುದ್ಧ ಇಷ್ಟೆಲ್ಲ ಮಾಡುವಾಗ ನಾನು ಏಕೆ ಅವರನ್ನು ಸುಮ್ಮನೆ ಬಿಡಬೇಕು ಎಂದು ನನಗೆ ಅನಿಸಿತು. ಹಾಗಾಗಿ ನಾನು ಅಂಥಹವರ ವಿರುದ್ಧ ನೇರವಾಗಿ ಮಾತನಾಡಲು ಆರಂಭಿಸಿದೆ’ ಎಂದಿದ್ದಾರೆ ನಟಿ ಕಂಗನಾ ರನೌತ್.
ಕಂಗನಾ ರನೌತ್, ಬಾಲಿವುಡ್ನ ಪ್ರತಿಭಾವಂತ ನಟಿ. ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಲವು ವರ್ಷಗಳಿಂದಲೂ ಅವರು ಬಾಲಿವುಡ್ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಇದೀಗ ಅವರು ಬಿಜೆಪಿ ಪಕ್ಷದ ಸದಸ್ಯೆ ಆಗಿದ್ದು, ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆದ್ದು ಸಂಸದೆ ಸಹ ಆಗಿದ್ದಾರೆ.
