0 Shares

ಬೆಂಗಳೂರು : ಇದೇ ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಅದೇಶಿಸಿದೆ. ಆದ್ರೆ, ಇದೀಗ ರಾಜ್ಯ ಸರ್ಕಾರ, ನಾನಾ ಕಾರಣಗಳನ್ನು ನೀಡಿ ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಮನವಿ ಮಾಡಿದೆ. ಈ ಸಂಬಂಧ ಸಿದ್ದರಾಮಯ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಜನ ಗಣತಿ ಕಾರಣ ಮುಂದಿಟ್ಟು ಸೆಪ್ಟೆಂಬರ್ 30ರ ರವರೆಗೆ ವಿಸ್ತರಣೆಗೆ ಮನವಿ ಮಾಡಿದೆ.

ಜನಗಣತಿ ಕಾರ್ಯದಲ್ಲಿ ಇಡೀ ಆಡಳಿತ ಯಂತ್ರ ತೊಡಗಿಸಿಕೊಂಡಿದೆ. ಜನ ಗಣತಿಯನ್ನು ಸಮಯಕ್ಕೆ ಸೀಮಿತವಾಗಿ ಮುಗಿಸಬೇಕು . ಎಣಿಕೆ ಮೇಲ್ವಿಚಾರಣೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ಗಾಗಿ ವ್ಯಾಪಕ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತಾ ಕಾರ್ಯಗಳಿಗೆ ಸೀಮಿತ ಅವಕಾಶವಿದೆ. ಮತದಾರರ ಪಟ್ಟಿಯ ವಿಶೇಷ ವರಿಷ್ಕರಣೆ ಸಹ ಏಕಕಾಲದಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ.

ಇದಕ್ಕೆ ಅದೇ ಕ್ಷೇತ್ರ ಮಟ್ಟದ ಕಾರ್ಯನಿರ್ವಾಹಕರನ್ನು ಒಳಗೊಂಡಿರುತ್ತದೆ . ಮೇ-ಜೂನ್ ಅವಧಿಯಲ್ಲಿ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಇದರಿಂದ ಲಭ್ಯವಿರುವ ಮಾನವಶಕ್ತಿ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಾಲಾವಕಾಶ ಬೇಕಿದ್ದು, ಚುನಾವಣಾ ಕಾಲಮಿತಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಿ ಎಂದು ಸರ್ಕಾರ, ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಗಡುವು ವಿಧಿಸಿ ಆದೇಶಿಸಿದ ಹೊರಡಿಸಿತ್ತು. ಕೋರ್ಟ್ ಆದೇಶ ಹಿನ್ನಲೆ ಚುನಾವಣೆಗೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಸರ್ಕಾರ ಮುಗಿಸಿದ್ದು, ಚುನಾವಣೆ ನಡೆಸುವ ಸಂಬಂಧ ಆಯೋಗವು ಸಹ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ, ಇದೀಗ ರಾಜ್ಯ ಸರ್ಕಾರ ಏಕಾಏಕಿ, ಚುನಾವಣೆಯನ್ನು ಮುಂದೂಡಿ ಎಂದು ಪತ್ರ ಬರೆದಿದೆ.

ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕೊನೆಯ ಬಾರಿಗೆ ಆಗಸ್ಟ್ 2015ರಲ್ಲಿ ನಡೆದಿತ್ತು. ಇದರ ಅವಧಿ ಸೆಪ್ಟಂಬರ್ 2020ರಲ್ಲಿ ಕೊನೆಗೊಂಡಿತ್ತು. ಅದಾದ ಬಳಿಕ ಇಲ್ಲಿವರೆಗೂ ಚುನಾವಣೆ ನಡೆದಿಲ್ಲ. ಇದೀಗ ಮತ್ತೆ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದು, ಇದಕ್ಕೆ ರಾಜ್ಯ ಚುನಾವಣಾ ಆಯೊಗ ಯಾವ ರೀತಿ ಸ್ಪಂದಿಸುತ್ತೆ ಎನ್ನುವುದು ಕಾದುನೋಡಬೇಕಿದೆ.

0 Shares

By admin

Leave a Reply

Your email address will not be published. Required fields are marked *