0 Shares

ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕನ್ನಂಬಾಡಿ ಕಟ್ಟೆ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99 ಅಡಿಗೆ ಕುಸಿದಿದ್ದು, ಮಳೆಗಾಲ ವಿಳಂಬವಾದರೆ ಕುಡಿಯುವ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದುರಾಗುವ ಭೀತಿ ಆವರಿಸಿದೆ. ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದೆ.

ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 22 ಟಿಎಂಸಿ ಮಾತ್ರ ನೀರು ಶೇಖರಣೆ ಇದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 15 ಟಿಎಂಸಿ ಮಾತ್ರ. ಪ್ರಸ್ತುತ ಜಲಾಶಯಕ್ಕೆ 66 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು 4,388 ಕ್ಯೂಸೆಕ್ ಇದೆ.

ಕಾವೇರಿ ನೀರನ್ನೇ ನಂಬಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮತ್ತು ಇತರ ನಗರಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಲಭ್ಯವಿರುವ ನೀರನ್ನು ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀಡಬೇಕಿದೆ ಮತ್ತು ಕುಡಿಯಲು ಮೀಸಲಿಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ತಡವಾದರೆ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಕಾವೇರಿ ನೀರು ಅವಲಂಬಿತ ಜನರಿಗೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಮತ್ತೊಂದೆಡೆ, ಬೆಂಗಳೂರಿನ ವಿವಿಧೆಡೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ರಾಜಾಜಿನಗರದ ಚಾಮುಂಡಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, 3,000ಕ್ಕೂ ಹೆಚ್ಚು ಕುಟುಂಬಗಳು ಹನಿ ನೀರಿಗಾಗಿ ಮಧ್ಯರಾತ್ರಿ ನಿದ್ದೆ ಬಿಟ್ಟು ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆಯಾಗಿದ್ದು, ಜನರು ದೂರದ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿಯೂ ನೀರಿನ ಭಾರಿ ಸಮಸ್ಯೆ ತಲೆದೋರಿದೆ. ಇದೀಗ ಕೆಆರ್​​ಎಸ್ ಡ್ಯಾಂನಲ್ಲೂ ನೀರಿನ ಮಟ್ಟ ಕುಸಿದಿರುವುದು ಬೆಂಗಳೂರಿನ ಜನತೆಗೆ ತಲೆನೋವು ಉಂಟುಮಾಡಿದೆ.

0 Shares

By admin

Leave a Reply

Your email address will not be published. Required fields are marked *