0 Shares

ಉತ್ತಂಗರೈ : “ತಮಿಳುನಾಡಿನಲ್ಲಿ ಮಹಿಳೆಯರಿಗೆ ಪ್ರಸ್ತುತ 1 ಸಾವಿರ ಹಣ ನೀಡುತ್ತಿದ್ದು, ಈ ಚುನಾವಣೆ ಬಳಿಕ ಕರ್ನಾಟಕ ಮಾದರಿಯಂತೆ 2 ಸಾವಿರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ತಮಿಳುನಾಡಿನ ಉತ್ತಂಗರೈ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಅವರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚುನಾವಣೆ ಪ್ರಚಾರ ಭಾಷಣ ಮಾಡಿದರು.

“1.31 ಕೋಟಿ ಕುಟುಂಬದ ಮಹಿಳೆಯರಿಗೆ ಇದರಿಂದ ಪ್ರಯೋಜನವಾಗಲಿದೆ. ವಿದ್ಯುತ್ ಮೀಟರ್ ಇಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು. ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಹಣಗಳ ಹೆಚ್ಚಳ ಮಾಡಲಾಗುವುದು” ಎಂದರು.

ದಕ್ಷಿಣ ಭಾರತ ವಿಭಜಿಸುವ ಬಿಜೆಪಿ – “ಸ್ಟಾಲಿನ್ ಅವರು ಮತ್ತೆ ತಮಿಳುನಾಡಿನ‌ ಮುಖ್ಯಮಂತ್ರಿಯಾಗಲಿದ್ದಾರೆ. ಅಣ್ಣಾ ಡಿಎಂಕೆಗೆ ಯಾವುದೇ ಅವಕಾಶವಿಲ್ಲ. ತನ್ನ ಅಸ್ತಿತ್ವ ಕಳೆದುಕೊಂಡಿರುವ ಅದು ಬಿಜೆಪಿ ಸೇರಿ ಛಿದ್ರವಾಗಿ ಹೋಗಿದೆ. ಇವರುಗಳು ದಕ್ಷಿಣ ಭಾರತವನ್ನ ಭಾಗ ಮಾಡಬೇಕು ಎಂದು ಹೊರಟಿದ್ದಾರೆ. ಅಣ್ಣಾ ಡಿಎಂಕೆಯವರು ಬಿಜೆಪಿ ಜೊತೆ ಸೇರಿ ತಮಿಳುನಾಡಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ” ಎಂದರು.

“ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಗಳಾಗಿದ್ದ ಕಾಮರಾಜ್ ಅವರು ಅಂದಿನ ಕಾಲದಲ್ಲಿಯೇ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು ಎಂದು ಆಲೋಚಿಸಿದ್ದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಎಲ್ಲಾ ವರ್ಗದ ಬಗ್ಗೆ ಚಿಂತನೆ ಮಾಡಿದೆ. ಕಾರ್ಮಿಕರು, ರೈತರು, ವರ್ತಕರು, ವಿದ್ಯಾರ್ಥಿಗಳು ಮಕ್ಕಳಿಂದ ವಯಸ್ಸಾದವರವರೆಗೆ ಕಾರ್ಯಕ್ರಮ ಕೊಟ್ಟಿದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ” ಎಂದರು.

“ಆಹಾರ ಭದ್ರತಾ ಕಾಯ್ದೆ, ನರೇಗಾ ಸೇರಿದಂತೆ ಅನೇಕ ಜನಪರ ಯೋಜನೆ ನೀಡಿದ್ದು ಕಾಂಗ್ರೆಸ್ ಪಕ್ಷ. ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಕರ್ನಾಟಕದಲ್ಲಿ ನೀಡಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ 2 ಸಾವಿರ, 10 ಕೆಜಿ ಅಕ್ಕಿ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ” ಎಂದರು.

“ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಅವರು ಪಕ್ಷದ ಯೂನಿಯನ್ ನಾಯಕರು. ಇದೇ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವವರು. ಹಸ್ತ ಇಲ್ಲ ಅಂದರೆ ನಾವು ನೀವು ಯಾರೂ ಬದುಕೋಕೆ ಆಗಲ್ಲ. ಎಲ್ಲರೂ ಹಸ್ತ ಬಳಸಿಯೇ ಮತ ಹಾಕಬೇಕು. ಇದೇ ಹಸ್ತ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿದೆ. ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಇದೇ ಕಾಂಗ್ರೆಸ್ ಪಕ್ಷ” ಎಂದರು‌.

“ತಮಿಳು ಸಂಸ್ಕೃತಿ, ತಮಿಳು ಭಾಷೆ, ಅಸ್ತಿತ್ವ, ಗೌರವ ಉಳಿಯಬೇಕು ಎಂದರೆ ಎಲ್ಲರೂ ಡಿಎಂಕೆ, ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಇತರರನ್ನು ಒಳಗೊಂಡ ಮೈತ್ರಿಕೂಟಕ್ಕೆ ಮತ ನೀಡಬೇಕು. ಸ್ಟಾಲಿನ್‌ ಅವರ ಮುಂದಾಳತ್ವದಲ್ಲಿ 20 ಪಕ್ಷಗಳ ಮೈತ್ರಿ ಒಂದುಗೂಡಿ ಕೆಲಸ ಮಾಡುತ್ತಿವೆ. ನಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ” ಎಂದು ಹೇಳಿದರು.

0 Shares

By admin

Leave a Reply

Your email address will not be published. Required fields are marked *