ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ಸಭೆಗಳನ್ನು ನಡೆಸಿ, ನೀಡಿದ ಸೂಚನೆಯನ್ವಯ ಇಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಾರ್ಡ್ ಸಂಖ್ಯೆ -111 ರಲ್ಲಿ ಇರುವ ಆಸ್ತಿ ನಂ. 04, 4ನೇ ಕ್ರಾಸ್, ವಿಕ್ಟೋರಿಯಾ ಲೇಔಟ್, ಶಾಂತಲನಗರ, ಬೆಂಗಳೂರು – ಪಿ.ಐ.ಡಿ. ಸಂಖ್ಯೆ: 76-122-4 ಆಸ್ತಿಗೆ ಸಂಬಂಧಿಸಿದಂತೆ, ಅನುಮೋದಿತ ಕಟ್ಟಡ ನಕ್ಷೆ ಹಾಗೂ ಕಟ್ಟಡ ಬೈಲಾ ನಿಯಮಗಳಿಗೆ ವಿರುದ್ಧವಾಗಿ ನಿರ್ಮಾಣಗೊಂಡ ಅಕ್ರಮ/ವ್ಯತ್ಯಾಸ ಕಟ್ಟಡ ಭಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂಬಂಧ ಬಿಬಿಎಂಪಿ ಕಾಯ್ದೆಯಡಿ ಮಾಲೀಕರಿಗೆ ಪೂರ್ವ ನೋಟಿಸ್ ನೀಡಲಾಗಿತ್ತು. ಹಾಗೂ ನಿಯಮಬಾಹಿರವಾಗಿ ನಿರ್ಮಿಸಲಾದ ಭಾಗಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಸೂಚಿಸಲಾಗಿತ್ತು. ಮಾಲೀಕರು ಸೂಚನೆಗಳನ್ನು ಪಾಲಿಸದ ಹಿನ್ನೆಲೆ, ಇಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅನುಮೋದನೆಗೆ ವಿರುದ್ಧವಾಗಿ ನಿರ್ಮಿಸಲಾದ ಅಕ್ರಮ/ವ್ಯತ್ಯಾಸದ ಕಟ್ಟಡ ಭಾಗಗಳನ್ನು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಗರದಲ್ಲಿ ಕಟ್ಟಡ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ತೆರವು ಕಾರ್ಯಾಚರಣೆಯನ್ನು ಶಾಂತಿನಗರ ಸಹಾಯಕ ಕಾರ್ಯಪಾಲಕ ಅಭಿಯಂತರರರಾದ ಶೇಖ್ ಮೋಹದ್ದಿನ್ ರವರ ನೇತೃತ್ವದಲ್ಲಿ, ಸಹಾಯಕ ಅಭಿಯಂತರರು, ಇತರೆ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಯಿತು.
