ಬೆಂಗಳೂರು : ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು ಅಂದರೆ ಭಾನುವಾರ ಬೆಳಿಗ್ಗೆ 2 ಗಂಟೆ ನೆರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತವಾಗಲಿದೆ. ವಿಜಯನಗರ ಮತ್ತು ಅತ್ತಿಗುಪ್ಪೆ ನಿಲ್ದಾಣಗಳಲ್ಲಿ ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು (ಭಾನುವಾರ) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ನೆರವೇರಿಸಲು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 07ರಿಂದ 09 ಗಂಟೆಯವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇತರೆ ಎಲ್ಲಾ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ದಿಂದ ಮೈಸೂರು ರಸ್ತೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ನಿಂದ ವೈಟೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಮತ್ತು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 07 ಗಂಟೆಯಿಂದ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಬೆಳಿಗ್ಗೆ 09 ಗಂಟೆಯ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳು ಎಂದಿನಂತೆ ಸಂಚರಿಸಲಿವೆ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ಮತ್ತು ಸಹಕರಿಸುವಂತೆ ಬಿಎಂಆರ್ಸಿಎಲ್ ವಿನಂತಿಸಿದೆ.
