ಭೋಪಾಲ್ : ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಥಾರ್ ಎಸ್‌ಯುವಿಯಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣವು ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆಯನ್ನೂ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ಆರೋಪಿಯನ್ನು ಫೆಬ್ರವರಿ 3ರಂದು ವಶಕ್ಕೆ ಪಡೆಯಲಾಯಿತು. ಆತನನ್ನು ಜೈಲಿನಲ್ಲಿ ಇರಿಸಲಾಗಿದೆ. ನಗರದಲ್ಲಿ ಜಿಮ್ ನಡೆಸುತ್ತಿರುವ ಅವನ ಗೆಳೆಯ ಮೇಜ್ ಖಾನ್ನನ್ನು ಫೆಬ್ರವರಿ 8ರಂದು ಬಂಧಿಸಲಾಯಿತು. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ಆಯುಕ್ತರು ವಿವರವಾದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಎಸಿಪಿ ಅಂಕಿತಾ ಖತ್ರಕರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.
4 ಪ್ರತ್ಯೇಕ ಕಾರುಗಳಲ್ಲಿ ವಿವಿಧ ಸ್ಥಳಗಳಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಪ್ರಮುಖ ಆರೋಪಿಗಳು ಆ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತನ್ನ ಐಫೋನ್‌ನಲ್ಲಿ ಆತ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಲು ಈ ವೀಡಿಯೊವನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆ ವಿಡಿಯೋವನ್ನು ಆನ್ಲೈನ್ನಲ್ಲಿ ಹಾಕಬಾರದು ಎಂದಾದರೆ 40,000 ರೂ.ಗಳನ್ನು ನೀಡಲು ಡಿಮ್ಯಾಂಡ್ ಮಾಡಿದ್ದಾರೆ. ಅತ್ಯಾಚಾರಕ್ಕೆ ಬಳಸಲಾದ ಥಾರ್ ಎಸ್‌ಯುವಿಯನ್ನು ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮುಚ್ಚಿಡಲಾಗಿತ್ತು. ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಿಡಿಯೋ ಇರುವ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
