ಬೆಂಗಳೂರು : ಇಂದು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್ನಲ್ಲಿ ಆಯೋಜಿಸಲಾಗಿದ್ದ, ಸಭೆಯೊಂದರಲ್ಲಿ ಭಾಗಿ ಆಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೋ ಸೈಮನ್ ಅವರು ಕೊನೆ ಉಸಿರೆಳೆದಿದ್ದಾರೆ.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಜೋ ಸೈಮನ್ ಅವರು ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ, ನಟ, ಗೀತರಚನೆಕಾರನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
1977 ರಲ್ಲಿ ಸಿನಿಮಾ ನಿರ್ದೇಶನ ಆರಂಭಿಸಿದ ಜೋ ಸೈಮನ್ ಮೊದಲು ನಿರ್ದೇಶಿಸಿದ್ದು ‘ಒಂದು ಪ್ರೇಮದ ಕತೆ’, ಕನ್ನಡಕ್ಕೆ ಹಲವಾರು ಆಕ್ಷನ್ ಮತ್ತು ಪ್ರೇಮಕತಾ ಸಿನಿಮಾಗಳನ್ನು ಜೋ ಸೈಮನ್ ನೀಡಿದ್ದಾರೆ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರೊಟ್ಟಿಗೆ ಆಪ್ತ ಗೆಳೆತನ ಹೊಂದಿದ್ದ ಜೋ ಸೈಮನ್, ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
