0 Shares

ದೇವನಹಳ್ಳಿ : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿಯನ್ನು ಹೊಂದಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.

ದೇವನಹಳ್ಳಿ ಟೌನ್ ನ ಕುರುಬರದೊಡ್ಡಿ ರಸ್ತೆಯಲ್ಲಿರುವ ಅಕ್ಷರ ದಾಸೋಹ ಕೇಂದ್ರದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ಒಳ್ಳೆಯ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿ ರಾಗಿ ಖರೀದಿಸುತ್ತಿದೆ. ರೈತರಿಂದ ನೇರವಾಗಿ ಖರೀದಿಸಿ ಅದರ ಹಣವನ್ನು ಯಾವುದೇ ಮಧ್ಯವರ್ತಿಗೆ ಆಸ್ಪದ ನೀಡದೇ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಸಂದಾಯ ಮಾಡಲಾಗುತ್ತದೆ. ಗುಣಮಟ್ಟದ ರಾಗಿ ಪೂರೈಕೆ ಆದಲ್ಲಿ ಮುಂದಿನ ವರ್ಷದಲ್ಲಿ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಇಟ್ಟುಕೊಂಡಿದೆ ಎಂದರು.

ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೂ ರಾಗಿ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಬೇಡಿಕೆಯ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಿಗೆ ರಾಗಿ ಸರಬರಾಜು ಮಾಡಲಾಗುವುದು. ಗುಣಮಟ್ಟದ ರಾಗಿಯಿಂದ ಬೇಡಿಕೆ ಹೆಚ್ಚಾಗಲಿದೆ, ಇದರಿಂದ ರೈತರ ಬಳಿ ರಾಗಿ ಖರೀದಿಸುವ ಪ್ರಮಾಣ ಕೂಡ ಹೆಚ್ಚಾಗಲಿದೆ. ಹಾಗಾಗಿ ರೈತರು ಗುಣಮಟ್ಟದ ರಾಗಿ ನೀಡಬೇಕು ಎಂದರು.

2025-26 ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ ರೂ.4886/- ನಿಗದಿ ಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಗಳನ್ನು ಮೀರದಂತೆ ಉತ್ತಮ ಗುಣಮಟ್ಟದ ರಾಗಿ ಖರೀದಿಸಲಾಗುವುದು. ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ. ಒಂದು ಬಾರಿ ನೊಂದಣಿ ಸಂದರ್ಭದಲ್ಲಿ ಇನ್ನೊಂದು ರಾಗಿ ಖರೀದಿ ವೇಳೆಯಲ್ಲಿ ಹಾಗಾಗಿ ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು- 3678, ದೊಡ್ಡಬಳ್ಳಾಪುರ ತಾಲ್ಲೂಕು- 12687, ಹೊಸಕೋಟೆ ತಾಲೂಕು-1240, ನೆಲಮಂಗಲ ತಾಲೂಕು- 5619 ಸೇರಿ ಒಟ್ಟು 23224 ರೈತರು ರಾಗಿ ಪೂರೈಕೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಅವರು ಮಾತನಾಡಿ, ರಾಗಿ ಬೆಳೆ ರೈತರ ಪಾಲಿನ ಸಂಜೀವಿನಿ ಇದ್ದಂತೆ, ರಾಗಿ ಬೆಳೆ ಕಡಿಮೆ ನೀರಿನಲ್ಲೂ ಉತ್ತಮವಾಗಿ ಬೆಳೆಯಬಹುದು. ರೈತರು ರಾಗಿ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು ಎಂದು ಹೇಳಿದರು.

0 Shares

By admin

Leave a Reply

Your email address will not be published. Required fields are marked *