0 Shares

ಚಿತ್ರದುರ್ಗ : ಕಳೆದ ಸಾವಿರ ದಿನಗಳು ಕಾಂಗ್ರೆಸ್‌ ಸರ್ಕಾರದ ಆಡಳಿತದ ಕರಾಳ ದಿನವಾಗಿದೆ. ಅಂದಮೇಲೆ ಯಾವ ಸಾಧನೆಗಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಎಂದು ತಿಳಿದಿಲ್ಲ. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದರೆ ನೀವು ಯಾರ ಏಜೆಂಟ್‌ಗಳು ಎಂದು ಸಿಎಂ ಸಿದ್ದರಾಮಯ್ಯ ಕೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಯಾವ ಸಾಧನೆಗಾಗಿ ಸಾವಿರದ ದಿನಗಳ ಸಮಾವೇಶ ಮಾಡುತ್ತಿದ್ದಾರೆ..? ಇದು ಕರಾಳ ದಿನಗಳು. ಸರ್ಕಾರದಿಂದ ರೇಷನ್‌ ಕಾರ್ಡ್‌ ರದ್ದು ಮಾಡಲಾಗಿದೆ. ಬಗರ್‌ಹುಕುಂ ಜಮೀನನ್ನು ಯಾರಿಗೂ ಕೊಡುತ್ತಿಲ್ಲ, 80 ಪರ್ಸೆಂಟ್‌ ಕಮಿಶನ್‌ನಿಂದಾಗಿ ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.

ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ ನಡೆದಿದ್ದು, ಈ ಹಣ ರಾಹುಲ್‌ ಗಾಂಧಿಯ ಬಳಿ ಇದೆಯೇ ಅಥವಾ ಸಿಎಂ ಸಿದ್ದರಾಮಯ್ಯನವರಿಗೆ ಸಂದಾಯವಾಗಿದೆಯೇ ಎಂದು ಗೊತ್ತಿಲ್ಲ. ಅಥವಾ ಇದೇ ಹಣದಿಂದ ಸಮಾವೇಶ ಆಯೋಜಿಸಿರಬಹುದು. ರೈತರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಿಗಳ ಕೊರತೆ, ಮೊದಲಾದ ಸಮಸ್ಯೆಗಳು ರಾಜ್ಯದಲ್ಲಿದೆ. ಆದರೂ ಸಾವಿರದ ದಿನಗಳ ಸಮಾವೇಶ ಮಾಡುತ್ತಿದ್ದಾರೆ.

ಭ್ರಷ್ಟಾಚಾರದಿಂದಾಗಿ ಈಗಾಗಲೇ ಒಬ್ಬ ಸಚಿವರು ರಾಜೀನಾಮೆ ನೀಡಿದ್ದು, ಅಬಕಾರಿ ಸಚಿವರು ರಾಜೀನಾಮೆ ನೀಡಬೇಕಿದೆ. ಸಿಎಂ ಸಿದ್ದರಾಮಯ್ಯನವರೇ ಶಾಸಕರನ್ನು ಫಾರಿನ್‌ ಟೂರ್‌ಗೆ ಕಳುಹಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸೋದರ ಡಿ.ಕೆ.ಸುರೇಶ್‌ ರಾಜಕೀಯದ ಗನ್‌ ಹಿಡಿದು ಬೀದಿಗಿಳಿದಿದ್ದಾರೆ. ಯಾರು ಶೂಟ್‌ ಮಾಡುತ್ತಾರೆಂದು ನೋಡಬೇಕಿದೆ ಎಂದರು.

ಶಕ್ತಿ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ ನೀಡುವುದು ಸರಿಯಲ್ಲ. ಮೊದಲಿಗೆ ಎಲ್ಲ ಮಹಿಳೆಯರಿಗೆ ಉಚಿತವೆಂದು ಹೇಳಿ, ಈಗ ಸ್ಮಾರ್ಟ್‌ ಕಾರ್ಡ್‌ ಬಗ್ಗೆ ಹೇಳಿದ್ದಾರೆ. ಸ್ಮಾರ್ಟ್‌ ಕಾರ್ಡ್‌ ಎಲ್ಲರಿಗೂ ಸಿಗುವುದಿಲ್ಲ. ಸರ್ಕಾರ ಪಾಪರ್‌ ಆಗಿರುವುದರಿಂದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಲು ಈ ತಂತ್ರ ಮಾಡಲಾಗಿದೆ. ಈಗಾಗಲೇ ಬಸ್‌ಗಳ ಕೊರತೆಯಾಗಿ ಶಾಲಾ ಮಕ್ಕಳನ್ನು ಲಾರಿಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿದೆ. ಸರ್ಕಾರಕ್ಕೆ ಬಸ್‌ ಕೊಡುವ ಯೋಗ್ಯತೆಯೂ ಇಲ್ಲ ಎಂದರು.

ಶಾಸಕ ಬೈರತಿ ಬಸವರಾಜು ಬಂಧನ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬಿಜೆಪಿ ಶಾಸಕರನ್ನು ಗುರಿ ಮಾಡುತ್ತಿದೆ. ಬೈರತಿ ಬಸವರಾಜು ಅವರಾಗಿಯೇ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜಕೀಯ ಷಡ್ಯಂತ್ರ. ಇದರ ಫಲವನ್ನು ಕಾಂಗ್ರೆಸ್‌ ನಾಯಕರು ಮುಂದೆ ಅನುಭವಿಸುತ್ತಾರೆ ಎಂದರು.

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಸಂಬಂಧ ಕಾಂಗ್ರೆಸ್‌ ಸರ್ಕಾರ ಸಭೆ ಕರೆದರೆ ಖಂಡಿತ ಹೋಗುತ್ತೇವೆ. ನದಿ, ಭಾಷೆ ಮೊದಲಾದ ವಿಚಾರಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಕಾಂಗ್ರೆಸ್‌ನ ಒಂಬತ್ತು ಸಂಸದರು ಕಾಣೆಯಾಗಿದ್ದಾರೆ. ಅವರೇ ಲೋಕಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಬೇಕು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಒಂದು ಬಾರಿಯೂ ಈ ಬಗ್ಗೆ ಮಾತಾಡಿಲ್ಲ ಎಂದರು.

0 Shares

By admin

Leave a Reply

Your email address will not be published. Required fields are marked *