ನವದೆಹಲಿ : ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದರು. ಇವರ ಸಂವಾದದ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಗೌರವ ಸಲ್ಲಿಸಲು ಬಂದ ಪ್ರಧಾನಿ ಮೋದಿ, ಈ ಸಂದರ್ಭದಲ್ಲಿ ತಮ್ಮ ಕಾರಿನಿಂದ ಇಳಿದು ನೇರವಾಗಿ ರಾಹುಲ್ ಗಾಂಧಿ ಅವರು ನಿಂತಿದ್ದ ಸ್ಥಳಕ್ಕೆ ಆಗಮಿಸಿ ಅವರೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ನಡೆಸಿದ ಸಂವಾದದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರಿನಿಂದ ಇಳಿದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಲು ಕೆಲಕಾಲ ವಿರಾಮ ತೆಗೆದುಕೊಂಡರು.
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಅವರು ಸೌಹಾರ್ದಯುತ ರೀತಿಯಲ್ಲಿ ಕೆಲ ಕಾಲ ಸಂವಹನ ನಡೆಸಿದರು. ಸಾಕಷ್ಟು ಹತ್ತಿರ ಬಂದು ನಿಂತ ಪ್ರಧಾನಿ ಮೋದಿ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಂತ ಶಾಂತಿಯುತವಾಗಿ ಗಮನವಿಟ್ಟು ಸಂವಹನ ನಡೆಸಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.
ಇವರಿಬ್ಬರ ನಡುವಿನ ಸಂವಾದ ಅತೀ ಕಡಿಮೆ ಅವಧಿಯದ್ದಾಗಿದ್ದರೂ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆಗಾಗ್ಗೆ ನಡೆಯುವ ಜಗಳಗಳ ಮಧ್ಯೆ ಸಾಕಷ್ಟು ಗಮನ ಸೆಳೆಯುತ್ತಿದೆ. ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ನಡೆದ ನೇರ, ಅನೌಪಚಾರಿಕ ಮಾತುಕತೆ ಇದಾಗಿದೆ. ರಾಹುಲ್ ಮತ್ತು ಮೋದಿ ಮಾತನಾಡುತ್ತಿದ್ದಾಗ ಹತ್ತಿರವಿದ್ದವರೆಲ್ಲ ಸುಮ್ಮನೆ ಕೇಳುತ್ತಿದ್ದರು.
ಜ್ಯೋತಿಬಾ ಫುಲೆ ಅವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲು ಸಂಸತ್ತಿನ ಆವರಣಕ್ಕೆ ಪ್ರಧಾನಿ ಮೋದಿ ಆಗಮಿಸಿದ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ರಾಜ್ಯಸಭೆಯ ಮಾಜಿ ಉಪಸಭಾಪತಿ ಹರಿವಂಶ್ ಮತ್ತು ಇತರ ನಾಯಕರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಸಂವಾದವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ ಅನೇಕ ನೆಟ್ಟಿಗರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಮ್ಮ ಪ್ರಧಾನಿ ಗಂಭೀರ ಸಂಭಾಷಣೆ ನಡೆಸುತ್ತಿರುವುದನ್ನು ನೋಡಿ ಸಂತೋಷವಾಯಿತು ಎಂದು ಹೇಳಿದ್ದಾರೆ.
